ಕೊನೆಗೂ ಬಿಎಂಟಿಸಿ ಚಾಲಕ, ನಿರ್ವಾಹಕರ ಅಕೌಂಟ್‍ಗೆ ಬಿತ್ತು ಸಂಬಳ

ಬೆಂಗಳೂರು: ಬಿಎಂಟಿಸಿ ಚಾಲಕರು, ನಿರ್ವಾಹಕರಿಗೆ ವೇತನ ವಿಳಂಬದ ಬಗ್ಗೆ ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇಂದು ಸಭೆ ಕರೆದು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರಿಗೆ ಇಲಾಖೆಯ ನಾಲ್ಕು ನಿಗಮ ಎಂಡಿಗಳಿಗೆ ಮೌಖಿಕ ಆದೇಶ ನೀಡಿ ಇಂದು ಮಧ್ಯಾಹ್ನದೊಳಗೆ ವೇತನ ನೀಡಿ ವರದಿ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಕೊನೆಗೂ ಬಿಎಂಟಿಸಿ ಚಾಲಕ, ನಿರ್ವಾಹಕರ ಅಕೌಂಟ್‍ಗೆ ಸಂಬಳ ಬಂದಿದೆ.

ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತ ಸಾರಿಗೆ ಸಚಿವರು ವೇತನ ನೀಡುವ ಕುರಿತು ಶಾಂತಿನಗರದ ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಚಿವರು, ಚಾಲಕ, ನಿರ್ವಾಹಕರ ಅಕೌಂಟ್‍ಗೆ ಸಂಬಳ ವಿಳಂಬ ಯಾಕಾಯ್ತು ಎಂದು ಪ್ರಶ್ನೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾವುದೇ ತಾರತಮ್ಯ ಮಾಡದೇ ಎಷ್ಟೇ ಕಷ್ಟವಿದ್ದರೂ ಸಂಬಳ ನೀಡಬೇಕು. ಸಾರಿಗೆ ಸಂಸ್ಥೆ ಮಲತಾಯಿ ಧೋರಣೆ ತೋರಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಬೇಸರಗೊಂಡ ಬಹುತೇಕ ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು ಆಯುಧ ಪೂಜೆ ಮಾಡದೇ ನೋವಿನಲ್ಲೇ ಬಸ್ ಚಾಲನೆ ಮಾಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ನೋಡಿ ಎಚ್ಚೆತ್ತು, ದಸರಾ ಹಬ್ಬಕ್ಕೆ ಸಂಬಳ ಕೊಡಲು ಸಾಧ್ಯವಾಗದ ಕಾರಣಕ್ಕೆ ಚಾಲಕ, ನಿರ್ವಾಹಕರಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಿತ್ರದುರ್ಗದಲ್ಲಿ ಕ್ಷಮೆ ಯಾಚಿಸಿದ್ದರು.

ಸದ್ಯ ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್ ನಿಂದ ಬಿಎಂಟಿಸಿ ಚಾಲಕ, ನಿರ್ವಹಕರ ಖಾತೆಗೆ ಸಂಬಳ ತಲುಪಿದೆ. ಸಂಬಳ ವಿಳಂಬ ಸಂಬಂಧ ಸಭೆ ಮುಗಿದ ಬಳಿಕ ಸಾರಿಗೆ ಸಚಿವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಪಬ್ಲಿಕ್ ಟಿವಿಯಲ್ಲಿ ಬಂದಿದ್ದ ವರದಿಯನ್ನ ನನ್ನ ಗಮನದಲ್ಲಿಟ್ಟುಕೊಂಡಿದ್ದೇನೆ. ವರದಿ ನೋಡಿದ ಕೂಡಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಎಲ್ಲಾ ಅಧಿಕಾರಿಗಳ ಜೊತೆ ಫೋನಿನಲ್ಲಿ ಮಾತಾಡಿ, ವಿಶೇಷ ಸಂದರ್ಭದಲ್ಲಿ ಬೇರೆ ಕೆಲಸ ಕಾರ್ಯಗಳನ್ನ ನಿಲ್ಲಿಸಿ ಸಂಬಳವನ್ನ ಕೊಡಿ ಎಂದು ಹೇಳಿದ್ದೆ. ಇಂದು ಚಾಲಕ ನಿರ್ವಾಹಕರಿಗೆ ಸಂಬಳ ಕೊಡಲಾಗಿದೆ ಎಂದು ತಿಳಿಸಿದರು.

ಗುರುವಾರ ವಿಧಾನ ಮಂಡಲ ಅಧಿವೇಶನ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷದವರು ಏನು ಪ್ರಸ್ತಾಪ ಮಾಡುತ್ತಾರೋ, ಅದಕ್ಕೆ ಸರಿಯಾದ ಮಾಹಿತಿ ಕೊಡುತ್ತೇವೆ. ವಿರೋಧ ಪಕ್ಷದವರು ತಮ್ಮ ಧ್ವನಿ ಹೆಚ್ಚಾದ ಮೇಲೆ ಕೇಂದ್ರದ ನೆರೆ ಪರಿಹಾರ ಬಂತು ಹೇಳುತ್ತಿದ್ದಾರೆ. ಆದರೆ ಕೋಳಿ ಕೂಗಿದ ಮೇಲೆ ಸೂರ್ಯೋದಯ ಆಗಲ್ಲ, ಸೂರ್ಯ ತನ್ನ ಕ್ರಿಯೆ ತಾನು ಮಾಡುತ್ತೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟರು.

ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಮಾಹಿತಿಯಿಲ್ಲ. ಸಂಜೆ ಎಲ್ಲಾ ಸಚಿವರು ಸೇರುತ್ತಿದ್ದೇವೆ. ನಮ್ಮಲ್ಲಿ ಬಣಗಳು, ಭಿನ್ನಮತಗಳು ಇಲ್ಲ, ನಾವೆಲ್ಲ ಒಟ್ಟಿಗಿದ್ದೇವೆ. ನಾವು ಮಾಧ್ಯಮಗಳನ್ನ ದೂರು ಇಡುವುದು ಕಾಲ್ಪನಿಕ ಕಥೆಗಳು ಅಷ್ಟೇ. ಮಾಧ್ಯಮಗಳಿಗೆ ನಿರ್ಬಂಧ ಹೇರಬಾರದು ಎನ್ನುವುದು ನನ್ನ ಹಾಗೂ ನಮ್ಮ ಸರ್ಕಾರದ ನಿಲುವು ಎಂದು ಹೇಳಿದರು.

Comments

Leave a Reply

Your email address will not be published. Required fields are marked *