ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾಗಿಂತ ಮುಂಚೆ ಸಲಾರ್ 2

ಅಂದುಕೊಂಡಂತೆ ಆಗಿದ್ದರೆ ಜ್ಯೂನಿಯರ್ ಎನ್.ಟಿ.ಆರ್ (Jr NTR) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಹೊಸ ಸಿನಿಮಾ ಕುರಿತಂತೆ ಅಪ್ ಡೇಟ್ ಸಿಗಬೇಕಿತ್ತು. ಆದರೆ, ಈ ಸಿನಿಮಾಗೂ ಮುಂಚೆ ಸಲಾರ್ 2 ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಲಾರ್ 2 ಚಿತ್ರದ ನಂತರ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಸಿನಿಮಾ ಮಾಡಲಿದ್ದಾರಂತೆ.

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಈಗಲೂ ಕೆಲವರು ಸಲಾರ್ ಸಿನಿಮಾದ ಗುಂಗಿನಲ್ಲೇ ಇದ್ದಾರೆ. ಈ ನಡುವೆ ಸಲಾರ್ 2 (Salaar 2) ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಏಪ್ರಿಲ್ ನಿಂದ ಸಲಾರ್ 2 ಚಿತ್ರದ ಶೂಟಿಂಗ್ ಕೆಲಸದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ತೊಡಗಿಕೊಳ್ಳಲಿದ್ದಾರಂತೆ.

ಈ ಹಿಂದೆ ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆಯಂತೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದರು.

ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’, ಯುವ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

 

‘ಸಲಾರ್ ’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದರು. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.