ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಸ್ತಿಪಟು ಸಾಕ್ಷಿ ಮಲಿಕ್

ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಸಾಕ್ಷಿ ಮಲಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 22 ವರ್ಷದ ಸತ್ಯವರ್ತ್ ಕಡಿಯಾನ್ ಜೊತೆ ರೊಹ್ಟಕ್ ನಲ್ಲಿ ಭಾನುವಾರ ಸಪ್ತಪದಿ ತುಳಿದಿದ್ದಾರೆ.

ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸಾಕ್ಷಿ ಅವರಿಗೆ ಸತ್ಯವರ್ತ್ ಜೊತೆ ನಿಶ್ಚಿತಾರ್ಥವಾಗಿತ್ತು. ಸಾಕ್ಷಿ ಅವರು ತಮ್ಮ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

2008ರಲ್ಲಿ ಬೀಜಿಂಗ್ ಹಾಗೂ 2012ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಪದಕಗಳನ್ನು ಗೆದ್ದಿದ್ದ ಸುಶಿಲ್ ಕುಮಾರ್ ಸಾಕ್ಷಿ ಮದುವೆಯಲ್ಲಿ ಭಾಗಿಯಾಗಿದ್ರು.

ಸತ್ಯವರ್ತ್ ಕೂಡ ಕುಸ್ತಿಪಟುವಾಗಿದ್ದು, ಸಾಕ್ಷಿ ಮಲಿಕ್‍ಗಿಂತ 2 ವರ್ಷ ಚಿಕ್ಕವರು. ರೊಹ್ಟಕ್‍ನಲ್ಲಿ ತಂದೆಯ ಅಖಾಡಾದಲ್ಲಿ ಸತ್ಯವರ್ತ್ ತರಬೇತಿ ನೀಡ್ತಿದ್ದಾರೆ. ಸತ್ಯವರ್ತ್ ಕೂಡ ಒಬ್ಬ ಒಳ್ಳೆಯ ಆಟಗಾರರಾಗಿದ್ದು, ಗ್ಲಾಸ್ಗೋನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅದೇ ವರ್ಷ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು.

ಕಳೆದ ವರ್ಷ ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಭಾವಹಿಸಿದ್ದ ಸಾಕ್ಷಿ ಕುಸ್ತಿಯಲ್ಲಿ ಭಾರತಕ್ಕೆ ಕಂಚು ತಂದುಕೊಟ್ಟಿದ್ದರು. ಈ ಮೂಲಕ ಒಲಿಪಿಂಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಾಕ್ಷಿ ಪಾತ್ರರಾದ್ರು. ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಬಳಿಕ ಭಾರತದ ಧ್ವಜವನ್ನು ಹಿಡಿದು ಸಾಕ್ಷಿ ಸಂಭ್ರಮಿಸಿದ್ದರು.

https://twitter.com/SakshiMalik/status/848026310446243841

Comments

Leave a Reply

Your email address will not be published. Required fields are marked *