ಬ್ರಿಜ್‌ ಭೂಷಣ್‌ ಆಪ್ತ ಕುಸ್ತಿ ಅಧ್ಯಕ್ಷ: ಶೂ ಬಿಚ್ಚಿಟ್ಟು‌, ಕಣ್ಣೀರಿಡುತ್ತಾ ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್!

ನವದೆಹಲಿ: ಬ್ರಿಜ್‌ ಭೂಷಣ್‌ ಸಿಂಗ್‌ ಆಪ್ತ ಸಂಜಯ್‌ ಸಿಂಗ್‌ (Sanjay Singh) ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್‌ (Sakshee Malikkh) ಕುಸ್ತಿಗೆ ವಿದಾಯ ಘೋಷಿಸಿದ್ದಾರೆ.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌‌ (Brij Bhushan Sharan Singh) ಬ್ಯುಸಿನೆಸ್‌ ಪಾರ್ಟನರ್‌ ಹಾಗೂ ಆಪ್ತರಾಗಿರುವ ಸಂಜಯ್‌ ಸಿಂಗ್‌ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ನಾನು ಕುಸ್ತಿ ಪಂದ್ಯಗಳಿಂದ ದೂರವಾಗುತ್ತಿದ್ದೇನೆ ಎಂದು ಕಣ್ಣೀರು ಹಾಕುತ್ತಾ ಘೋಷಿಸಿದರು. ಅಲ್ಲದೇ ಇದೇ ವೇಳೆ ಅವರು ತಮ್ಮ ಶೂ ಕಳಚಿ ಸುದ್ದಿಗೋಷ್ಠಿ ನಡೆಯುತ್ತಿದ್ದ ಟೇಬಲ್‌ ಮೇಲೆ ಇರಿಸಿ, ಕಣ್ಣೀರು ಸುರಿಸಿದರು. ಇದನ್ನೂ ಓದಿ: ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷಗಿರಿಗೆ ಬ್ರಿಜ್ ಭೂಷಣ್ ಬೆಂಬಲಿತ ಅಭ್ಯರ್ಥಿ ಆಯ್ಕೆ

2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್‌ ಕಂಚಿನ ಪದಕ ವಿಜೇತರಾಗಿದ್ದರು.

ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ ಪದಕ ವಿಜೇತೆ ವಿನೇಷ್‌ ಫೋಗಟ್‌ ಕೂಡಾ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು. ಸಂಜಯ್‌ ಸಿಂಗ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿ ಪಟುಗಳ ಮೇಲೆ ದೌರ್ಜನ್ಯ ಮುಂದುವರಿಯಲಿದೆ. ನಮಗೆ ನ್ಯಾಯ ಸಿಗುವುದು ಹೇಗೆ ಎಂದು ನಮಗೆ ಗೊತ್ತಾಗುತ್ತಿಲ್ಲ. ನಮ್ಮ ಕುಸ್ತಿ ಭವಿಷ್ಯ ಹೇಗೆ ಎಂಬ ಚಿಂತೆ ಶುರುವಾಗಿದೆ. ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಫೋಗಟ್‌ ಹೇಳಿದರು.

ಕೇಂದ್ರ ಸರ್ಕಾರವು ನಮಗೆ ನೀಡಿದ ಭರವಸೆಯನ್ನು ಈಡೇರಿಸದೇ ಇರುವುದು ದೌರ್ಭಾಗ್ತ ಎಂದು ಬಜರಂಗ್‌ ಪುನಿಯಾ ಹೇಳಿದ್ರು. ನಮಗೆ ಯಾವುದೇ ಪಕ್ಷದ ಜೊತೆ ಸಂಬಂಧವಿಲ್ಲ. ನಾವು ರಾಜಕೀಯಕ್ಕಾಗಿ ಇಲ್ಲಿಗೆ ಬಂದಿಲ್ಲ. ನಾವು ಸತ್ಯಕ್ಕಾಗಿ ಹೋರಾಡುತ್ತಿದ್ದೆವು. ಆದರೆ ಇಂದು ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಆಪ್ತ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾದರು ಎಂದು ಪುನಿಯಾ ಹೇಳಿದರು. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಬ್ರಿಜ್ ಭೂಷಣ್‌ಗೆ ಬಿಗ್ ರಿಲೀಫ್

ಏನಾಗಿತ್ತು?: ಈ ಹಿಂದೆ ಕುಸ್ತಿ ಫೆಡರೇಷನ್‌ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದು ದೂರು ದಾಖಲಾಗಿತ್ತು. ನಂತರ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು.

ಕೊನೆಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದರು. ಇದನ್ನೂ ಓದಿ: ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ – ಕುಸ್ತಿಪಟುಗಳ ಸ್ಪಷ್ಟನೆ