12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸೈರಾಟ್ ಬೆಡಗಿ

ಮುಂಬೈ: ಮರಾಠಿಯ ‘ಸೈರಾಟ್’ ಚಿತ್ರದ ಮೂಲಕ ಖ್ಯಾತರಾಗಿರುವ ನಟಿ ರಿಂಕು ರಾಜ್‍ಗುರು ಈಗ 12ನೇ ತರಗತಿ ಕಲಾ ವಿಭಾಗದಲ್ಲಿ ಶೇ. 82ರಷ್ಟು ಅಂಕಗಳಿಸಿ ತೇರ್ಗಡೆಯಾಗಿದ್ದಾರೆ.

ಮಂಗಳವಾರ ಮಹಾರಾಷ್ಟ್ರದ 12ನೇ ತರಗತಿ ಫಲಿತಾಂಶ ಹೊರಬಂದಿದ್ದು, ನಟಿ ರಿಂಕು 650ಕ್ಕೆ 533 ಅಂಕಗಳಿಸಿದ್ದಾರೆ. ರಿಂಕು ಇಂಗ್ಲಿಷ್‍ನಲ್ಲಿ 54, ಮರಾಠಿ ಹಾಗೂ ಇತಿಹಾಸದಲ್ಲಿ 86, ಭೂಗೋಳಶಾಸ್ತ್ರದಲ್ಲಿ 98, ರಾಜಕೀಯ ವಿಜ್ಞಾನದಲ್ಲಿ 83, ಅರ್ಥಶಾಸ್ತ್ರದಲ್ಲಿ 77 ಹಾಗೂ ಪರಿಸರ ಶಿಕ್ಷಣದಲ್ಲಿ 50ಕ್ಕೆ 49 ಅಂಕ ಪಡೆದಿದ್ದಾರೆ.

ಎಸ್‍ಎಸ್‍ಎಲ್‍ಸಿಯಲ್ಲಿ ಫಲಿತಾಂಶದಲ್ಲಿ ರಿಂಕು ಶೇ.66ರಷ್ಟು ಅಂಕಗಳಿಸಿದ್ದರು. ಈಗ ರಿಂಕು ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಿಂತಲೂ 12ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

2016ರಲ್ಲಿ ಬಿಡುಗಡೆಯಾದ ಸೈರಾಟ್ ಚಿತ್ರದಿಂದ ರಿಂಕು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸೈರಾಟ್ ಚಿತ್ರ ಸೂಪರ್ ಡೂಪರ್ ಹಿಟ್ ಆಗಿ ಮರಾಠಿ ಚಿತ್ರ ಉದ್ಯಮದಲ್ಲಿ ಎಲ್ಲ ದಾಖಲೆಯನ್ನು ಮುರಿದಿತ್ತು. ಅಲ್ಲದೆ ಈ ಚಿತ್ರಕ್ಕಾಗಿ ರಿಂಕು ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು.

ಸೈರಾಟ್ ಚಿತ್ರ ಕನ್ನಡ, ಹಿಂದಿ, ಬೆಂಗಾಲಿ, ಒಡಿಯಾ ಹಾಗೂ ಪಂಜಾಬಿ ಭಾಷೆಯಲ್ಲಿ ರಿಮೇಕ್ ಮಾಡಲಾಗಿತ್ತು. ಅಲ್ಲದೇ ಹಲವು ಭಾಷೆಗಳಲ್ಲಿ ಡಬ್‍ ಕೂಡ ಮಾಡಲಾಗಿತ್ತು. ಕನ್ನಡದಲ್ಲಿ ‘ಮನಸ್ಸು ಮಲ್ಲಿಗೆ’ ಆಗಿ ರಿಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲೂ ರಿಂಕು ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವನ್ನು ಎಸ್. ನಾರಾಯಣ್ ನಿರ್ದೇಶನ ಮಾಡಿದ್ದರು.

Comments

Leave a Reply

Your email address will not be published. Required fields are marked *