ಪೆನ್ ಹಿಡಿದು ಕಾದು ಕೂತ ಸಾಯಿ ಪಲ್ಲವಿ – ರೌಡಿ ಬೇಬಿ ಹೊಸ ಲುಕ್ ವೈರಲ್

ಹೈದರಾಬಾದ್: ಅದ್ಭುತ ಅಭಿನಯ, ಡ್ಯಾನ್ಸ್, ಮುದ್ದಾದ ಮುಖದ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರೇಮಂ ಸುಂದರಿ ಸಾಯಿ ಪಲ್ಲವಿ ಫೋಟೋವೊಂದು ಎಲ್ಲೆಡೆ ವೈರಲ್ ಆಗುತ್ತಿದ್ದು, ಇತ್ತ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರೌಡಿ ಬೇಬಿಗೆ ನಟ ರಾಣಾ ದಗ್ಗುಬಾಟಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಸಾಯಿ ಪಲ್ಲವಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳ ಮನ ಗೆದ್ದಿದ್ದಾರೆ. 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಾಯಿಗೆ ಅಭಿಮಾನಿಗಳು ಹಾಗೂ ಸಿನಿ ಕಲಾವಿದರು ಶುಭಾಷಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅಲ್ಲದೇ ಸಾಯಿ ಪಲ್ಲವಿ ನಟಿಸುತ್ತಿರುವ ‘ವಿರಾಟಪರ್ವಂ’ ಸಿನಿಮಾದ ಲುಕ್ ಕೂಡ ಇಂದೇ ರಿಲೀಸ್ ಆಗಿದ್ದು, ಈ ಪೋಸ್ಟ್‌ರ್‌ ಅನ್ನು ಹಂಚಿಕೊಂಡು ರಾಣಾ ರೌಡಿ ಬೇಬಿಗೆ ವಿಶ್ ಮಾಡಿದ್ದಾರೆ.

ವಿರಾಟಪರ್ವಂ ಸಿನಿಮಾದಲ್ಲಿ ರಾಣಾ ನಾಯಕರಾಗಿದ್ದು, ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಲುಕ್‍ನಲ್ಲಿ ಸಾಯಿ ಒಂದು ಬ್ಯಾಗ್ ಜೊತೆಯಲ್ಲಿಟ್ಟುಕೊಂಡು, ಕೈಯಲ್ಲಿ ಪೆನ್ನು ಹಿಡಿದು, ಯಾರಿಗೋ ಕಾಯುತ್ತಿರುವ ಹಾಗೆ ಕುಳಿತು ಕೊಂಡಿದ್ದಾರೆ. ‘ವಿರಾಟಪರ್ವಂ’ ಸಿನಿಮಾಗೆ ವೇಣು ಉಡುಗುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ನಕ್ಸಲಿಸಂ ಬಗ್ಗೆ ಇರಲಿದ್ದು, ಹೃದಯಸ್ಪರ್ಶಿ ಪ್ರೇಮ ಕಥೆ ಚಿತ್ರದ ಹೈಲೈಟ್ ಎನ್ನಲಾಗಿದೆ. ಅದರಲ್ಲೂ ಈ ಸಿನಿಮಾದಲ್ಲಿ ಸಾಯಿ ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.

ವಿರಾಟಪರ್ವಂ ಸಿನಿಮಾ ಜೊತೆಗೆ ಲವ್ ಸ್ಟೋರಿ ಸಿನಿಮಾದಲ್ಲಿಯೂ ಸಾಯಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಲವ್ ಸ್ಟೋರಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಯಾವಾಗಪ್ಪ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು, ಸಿನಿಪ್ರಿಯರು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿಗೆ ನಾಗ್ ಚೈತನ್ಯ ನಾಯಕರಾಗಿ ಸಾಥ್ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *