ನಟಿ ಖುಷ್ಬೂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ- ಡಿಎಂಕೆ ನಾಯಕ ಅರೆಸ್ಟ್, ಪಕ್ಷದಿಂದ ಉಚ್ಛಾಟನೆ

ಚೆನ್ನೈ: ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ (Khushbu Sundar) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಡಿಎಂಕೆ (DMK) ನಾಯಕ ಶಿವಾಜಿ ಕೃಷ್ಣಮೂರ್ತಿ (Sivaji Krishnamurthy) ಯನ್ನು ಭಾನುವಾರ ಚೆನ್ನೈ ಪೊಲೀಸರು (Chennai Police) ಬಂಧಿಸಿದ್ದಾರೆ. ಅಲ್ಲದೆ ಪಕ್ಷದಿಂದಲೂ ಉಚ್ಛಾಟನೆ ಮಾಡಲಾಗಿದೆ.

ತಮ್ಮ ವಿರುದ್ಧ ಕೃಷ್ಣಮೂರ್ತಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವೀಡಿಯೋವನ್ನು ಖುಷ್ಬೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಡಿಎಂಕೆ ವಿರುದ್ಧ ಅವರು ಕಿಡಿಕಾರಿರುವ ಅವರು ಮಹಿಳೆಯರನ್ನು ಕೀಳಾಗಿ ಕಾಣುವ ವ್ಯಕ್ತಿಗಳಿಗೆ ಡಿಎಂಕೆ ಆಶ್ರಯ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದಾಗಲೂ ಗದ್ಗದಿತರಾಗಿ ಮಾತನಾಡಿರುವ ಖುಷ್ಬೂ, ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದ್ದಾರೆ. ಇದು ಕೇವಲ ಬಿಜೆಪಿ ಮಹಿಳಾ ನಾಯಕಿಯ ಮೇಲಿನ ದಾಳಿಯಲ್ಲ, ಒಟ್ಟಾರೆ ಮಹಿಳೆಯರ ಮೇಲಿನ ದಾಳಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರೀ ಅನಾಹುತದಿಂದ ಮಹಾರಾಷ್ಟ್ರ ಸಚಿವರು ಜಸ್ಟ್ ಮಿಸ್

ಸದ್ಯ ಬಿಜೆಪಿ (BJP) ಯಿಂದ ಭಾರೀ ಟೀಕೆಗಳು ವ್ಯಕ್ತವಾದ ನಂತರ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಡಿಎಂಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಅವರು ಪಕ್ಷದ ಶಿಸ್ತಿನ ಉಲ್ಲಂಘನೆ ಮತ್ತು ಪಕ್ಷಕ್ಕೆ ಅಪಖ್ಯಾತಿ ತಂದಿರುವ ಕಾರಣ ಕೃಷ್ಣಮೂರ್ತಿ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸುವುದು ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದಲೂ ಉಚ್ಛಾಟನೆ ಮಾಡುವುದಾಗಿ ಘೋಷಿಸಿದರು.