ಮಂಡ್ಯ: ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಾರೆ. ಅವರನ್ನೂ ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಜಡಿಯುತ್ತೀರಾ ಎಂದು ಕಾಂಗ್ರೆಸ್ಸಿನಿಂದ ಅಮಾನತುಗೊಂಡ ಕೆಪಿಸಿಸಿ ಸದಸ್ಯ ಹಿಂಡವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿರುವುನ್ನು ಸ್ವಾಗತಿಸುತ್ತೇನೆ. ಆದರೆ ಜೆಡಿಎಸ್ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಕಗ್ಗೊಲೆ ಮಾಡ್ತಿದ್ದಾರಲ್ಲ ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತೀರಾ? ಕಾಂಗ್ರೆಸ್ ಕಾರ್ಯಕರ್ತರು ತೊಂದರೆ ಅನುಭವಿಸುತ್ತಿದ್ದಾಗ ಯಾವ ರಾಜ್ಯ ನಾಯಕರು ಸಹಾಯಕ್ಕೆ ಬರುವುದಿಲ್ಲ. ಆದರೆ ಜೆಡಿಎಸ್‍ನವರಿಗೆ ತೊಂದರೆ ಆದರೆ ಅವರ ಕುಟುಂಬವೇ ಬಂದು ಆತ್ಮಸ್ಥೈರ್ಯ ತುಂಬುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಅನಾಥರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಸುಮಲತಾ ಬಂದಿದ್ದಾರೆ. ಈಗ ಪಕ್ಷಕ್ಕಾಗಿ ಬೇರೆ ಯಾರಿಗೋ ವೋಟ್ ಕೇಳಿ ಮುಂದಿನ ದಿನಗಳಲ್ಲಿ ಯಾವ ಮುಖ ಇಟ್ಟುಕೊಂಡು ನಮಗೆ ವೋಟ್ ಕೇಳೋದು. ನಾನು ಯಾವ ಅಮಾನತಿಗೆ ಬಗ್ಗಲ್ಲ. ನಾನೀಗ ಫ್ರೀ ಬರ್ಡ್ ಸುಮಲತಾ ಪರವಾಗಿ ಇನ್ನು ಹೆಚ್ಚಿನ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪಕ್ಷ ವಿರೋಧಿ ಕೆಲಸ ಮಾಡುವವರು ರಾಜೀನಾಮೆ ಕೊಟ್ಟು ಹೋಗಲಿ ಎಂಬ ಜಿಲ್ಲಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿ, ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಎರಡು ಬಾರಿ ಎಂಎಲ್‍ಸಿ ಟಿಕೆಟ್ ಕೊಡಿಸಿದ್ದು ಯಾರು ಅಂತ ಕೇಳಿ. ಆಗ ನಾಳೆಯಿಂದ ರಾಜೀನಾಮೆ ಪರ್ವ ಆರಂಭವಾಗಿ ಬಿಡುತ್ತೆ. ಆದ್ರೆ ದುಡುಕುವುದು ಬೇಡ ಅಂತ ನಾನೇ ಕಾರ್ಯಕರ್ತರನ್ನ ಸುಮ್ಮನಿರಿಸಿದ್ದೇನೆ. ನಾನು ಗೆಯ್ಯುವ ಎತ್ತು ನನ್ನ ಯಾರ ಬೇಕಾದರು ಗುರುತಿಸುತ್ತಾರೆ. ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಉಚ್ಛಾಟನೆಗೆಲ್ಲ ಹೆದರಿಕೊಳ್ಳುತ್ತೇನೆ ಅಂತ ಅಂದುಕೊಂಡಿದ್ದಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ನನ್ನಂತಹ ಲಕ್ಷಾಂತರ ಜನ ಸುಮಲತಾ ಅಂಬರೀಶ್ ಜೊತೆಗಿದ್ದಾರೆ ಎಂದರು.

Leave a Reply