– 2019ರಲ್ಲೇ ಸಿನೆಮಾ ಮಾದರಿಯಲ್ಲಿ ಚಿನ್ನ ಕಳ್ಳತನದ ಪ್ಲಾನ್ ಮಾಡಿದ್ದ ಕಿರಾತಕ
ಬಳ್ಳಾರಿ: ಕೇರಳದ (Kerala) ಶಬರಿಮಲೆಯಲ್ಲಿ ಚಿನ್ನ ಕಳ್ಳತನ ಪ್ರಕರಣಕ್ಕೆ (Sabarimala Gold Theft Case) ಸಂಬಂಧಿಸಿದಂತೆ ದಿನಕ್ಕೊಂದು ಸತ್ಯ ಹೊರಬರುತ್ತಿದೆ. ನಾಲ್ಕೂವರೆ ಕೆಜಿ ಚಿನ್ನ ಕಳ್ಳತನದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಸಿನಿಮಾ ಮಾದರಿಯಲ್ಲಿ ಪಕ್ಕಾ ಪ್ಲಾನ್ ಮಾಡಿದ್ದ ಅನ್ನೋದು ಎಸ್‌ಐಟಿ (SIT) ತನಿಖೆ ವೇಳೆ ಬಯಲಾಗಿದೆ.

ಉನ್ನಿಕೃಷ್ಣನ್ ಖತರ್ನಾಕ್ ಪ್ಲಾನ್‌ಗೆ ಸ್ವತಃ ಕೇರಳ ಎಸ್‌ಐಟಿ ತಂಡವೇ ಶಾಕ್ ಆಗಿದೆ. 2019ರಲ್ಲೇ ಖತರ್ನಾಕ್ ಪ್ಲಾನ್ ಮಾಡಿದ್ದ ಉನ್ನಿಕೃಷ್ಣನ್, ಬಳ್ಳಾರಿ, ಬೆಂಗಳೂರು ಹಾಗೂ ತಮಿಳುನಾಡು ಸೇರಿ ಒಟ್ಟು 3 ಕಡೆ ಶಬರಿಮಲೆ ದೇವಸ್ಥಾನಕ್ಕೆ ಚಿನ್ನ ಲೇಪಿತ ಬಾಗಿಲು ಮಾಡಿಸಿದ್ದ. 2 ಕಡೆ ಮಾತ್ರ ನಿಜವಾದ ಚಿನ್ನದ ಬಾಗಿಲು ಮಾಡಿಸಿದ್ರೆ, ಇನ್ನೊಂದು ಕಡೆ ತಾಮ್ರ ಹೆಚ್ಚಿರುವ ಬಾಗಿಲು ರೆಡಿ ಮಾಡಿಸಿದ್ದ. ಕೊನೆಗೆ ಅಪ್ಪಟ ಚಿನ್ನದ ಬಾಗಿಲುಗಳನ್ನ ತಾನೇ ಇಟ್ಟುಕೊಂಡಿದ್ದ. ಬಳಿಕ ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟು ತನಗೇನೂ ಗೊತ್ತಿಲ್ಲ ಎಂಬಂತೆ ಅಮಾಯಕನ ರೀತಿ ಇದ್ದ. ಈ ಸತ್ಯ ಇದೀಗ ಎಸ್‌ಐಟಿ ತನಿಖೆಯಲ್ಲಿ ಬಟಾಬಯಲಾಗಿದೆ. ಇದನ್ನೂ ಓದಿ: ಆರೋಪಿ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದು ನಿಜ – ಸತ್ಯ ಒಪ್ಪಿಕೊಂಡ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್

ಬಳ್ಳಾರಿಯ ಚಿನ್ನದ ಉದ್ಯಮಿ, ರೊದ್ದಂ ಗೋಲ್ಡ್ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರು 2019ರಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಚಿನ್ನದ ಬಾಗಿಲು ರೆಡಿ ಮಾಡಿಕೊಟ್ಟಿದ್ದರು. ಅದು ಬಳ್ಳಾರಿಯಲ್ಲಿಯೇ ಚಿನ್ನದ ಬಾಗಿಲು ರೆಡಿಯಾಗಿತ್ತು. ಉನ್ನಿಕೃಷ್ಣನ್ ಕೇಳಿದ್ದ ಹಿನ್ನೆಲೆಯಲ್ಲಿ ಈ ಚಿನ್ನದ ಉದ್ಯಮಿ ಗೋವರ್ಧನ್ ಚಿನ್ನದ ಬಾಗಿಲು ದಾನ ಮಾಡಿದ್ದರು. ಆದರೆ ಅಸಲಿ ಚಿನ್ನದ ಬಾಗಿಲು ಬದಲಾಗಿದ್ದೇಗೆ ಅನ್ನೋದೆ ಸಸ್ಪೆನ್ಸ್ ಆಗಿ ಉಳಿದಿತ್ತು. ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ್, ನಾನು 2019ರಲ್ಲಿ ಚಿನ್ನದ ಬಾಗಿಲು ರೆಡಿ ಮಾಡಿ ಕೊಟ್ಟಿದ್ದು ನಿಜ. ಆದ್ರೆ ಅದು ಆಮೇಲೆ ಹೇಗೆ ಬದಲಾಯ್ತು ಅನ್ನೋದು ಗೊತ್ತಿಲ್ಲ. ನಾನು ಅಯ್ಯಪ್ಪಸ್ವಾಮಿ ಭಕ್ತ ಆಗಿದ್ರಿಂದ 2019ರಿಂದಲೇ ನನಗೆ ಉನ್ನಿಕೃಷ್ಣನ್ ಪರಿಚಯ ಆಗಿತ್ತು. ದೇವರ ಚಿನ್ನ ಕದ್ದವರು ಯಾರೇ ಆಗಿದ್ರೂ ಶಿಕ್ಷೆ ಆಗುತ್ತೆ. ನನ್ನ ಮೇಲೂ 475 ಗ್ರಾಂ ಚಿನ್ನ ಖರೀದಿಯ ಆರೋಪವಿದ್ದು, ಎಲ್ಲವನ್ನೂ ಎಸ್‌ಐಟಿಗೆ ಹಿಂದಿರುಗಿಸಿ ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ಆದರೆ ಉನ್ನಿಕೃಷ್ಣನ್ ಇತ್ತೀಚೆಗೆ ಕೊಟ್ಟಿದ್ದು ದೇವರ ಚಿನ್ನ ಅನ್ನೋದು ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಉನ್ನಿಕೃಷ್ಣನ್ ಚಿನ್ನ ಕೊಟ್ಟಿದ್ದ ಅಸಲಿ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ
ಇನ್ನೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಚಿನ್ನ ಕದ್ದ ಆರೋಪಿ ಉನ್ನಿಕೃಷ್ಣನ್ ಈಗಾಗಲೇ ಕಂಬಿ ಹಿಂದೆ ತಳ್ಳಲ್ಪಟ್ಟಿದ್ದಾನೆ. ಆದ್ರೆ ಈ ಪ್ರಕರಣದಲ್ಲಿ ಉನ್ನಿಕೃಷ್ಣನ್ ನಂಬಿ ಚಿನ್ನ ಖರೀದಿ ಮಾಡಿದವರ ಪಾಡು ಕಾಗೆಯಂತಾಗಿದೆ. ಇನ್ನೆರಡು ದಿನಗಳಲ್ಲಿ ಕೇರಳ ಎಸ್‌ಐಟಿ ತಂಡ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಲಿದ್ದು, ಇನ್ನಷ್ಟು ಕರಾಳ ಸತ್ಯ ಬಯಲಾಗಲಿದೆ.
