ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕಗೆ ಪರಮೇಶ್ವರ್ ಸನ್ಮಾನ

– ತಿಮ್ಮಕ್ಕರ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ತಿದ್ದಾರೆ ಡಿಸಿಎಂ

ಬೆಂಗಳೂರು: ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸಾಲುಮರದ ತಿಮ್ಮಕ್ಕ ಅವರಿಗೆ ಇಂದು ಸದಾಶಿವನಗರ ಬಿಡಿಎ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ತಿಮ್ಮಕ್ಕ ಅವರನ್ನು ಸನ್ಮಾನಿಸಿದ್ರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ತಿಮ್ಮಕ್ಕ ಅವರನ್ನು ಚಿಕ್ಕಣ್ಣ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದ್ರೆ ಇವರಿಗೆ ಮಕ್ಕಳು ಆಗಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ ವೇಳೆ ಗಿಡಗಳನ್ನು ಬೆಳೆಸುವ ಮೂಲಕ ನಿರಾಸೆಯನ್ನು ಸರಿದೂಗಿಸುವ ಕೆಲಸವನ್ನು ಮಾಡಿದ್ದಾರೆ. ಸುಮಾರು 4 ಕಿ.ಮೀ ರಸ್ತೆಯಲ್ಲಿ ಮರಗಳನ್ನು ಬೆಳೆಸಿ, ತಾವೇ ಸ್ವತಃ ತಲೆ ಮೇಲೆ ನೀರು ಹೊತ್ತುಕೊಂಡು ಹೋಗಿ ಆ ಗಿಡಗಳನ್ನು ಬೆಳೆಸಿ ಇಂದು ಅವೆಲ್ಲ ದೊಡ್ಡ ವೃಕ್ಷಗಳಾಗಿ ಇಡೀ ವಿಶ್ವಕ್ಕೆ ಮಾದರಿಯಾಗುವಂತಹ ಮಹಾನ್ ಕಾರ್ಯ ಮಾಡಿದ್ದಾರೆ ಅಂದ್ರು.

ಇಡೀ ವಿಶ್ವದಲ್ಲಿ ಪರಿಸರಕ್ಕೆ ಪರಿಸರ ನಾಶವಾಗುವ ಸಂದರ್ಭದಲ್ಲಿ ಅವರು ಮಾಡಿರುವ ಈ ಕೆಲಸ ನಮ್ಮೆಲ್ಲರಿಗೂ ಮಾದರಿ. ಇದನ್ನು ಗುರುತಿಸಿರುವ ಭಾರತ ಸರ್ಕಾರ ಹಾಗೂ ರಾಷ್ಟ್ರಪತಿ ಒಬ್ಬ ಸಾಮಾನ್ಯ ಮಹಿಳೆ ವಿಶ್ವಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿರುವುದರಿಂದ ಶ್ರೇಷ್ಠತೆಯನ್ನು ಕಂಡಿದ್ದಾರೆ. ಬಹುಶಃ ಈ ಪದ್ಮ ಶ್ರೀ ಪ್ರಶಸ್ತಿ ಅವರಿಗಷ್ಟೇ ಸಿಕ್ಕಿದೆ ಎಂದು ನಾನು ಅಂದುಕೊಳ್ಳಲ್ಲ, ಬದಲಾಗಿ ಅವರ ಮೂಲಕ ಪರಿಸರ ಪ್ರಜ್ಞೆ ಮೂಡಿಸುವಂತಹ ಕೆಲಸ ಆಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ವೈಯಕ್ತಿಕವಾಗಿ ಅವರ ಬಗ್ಗೆ ಅಪಾರ ಗೌರವ ಇದೆ. ಇಂದಿಗೂ ಕೂಡ ಬಡತನದಿಂದ ಹೊರಬಂದಿದ್ದಾರೆ ಎಂದು ನನಗನ್ನಿಸುತ್ತಿಲ್ಲ. ಅನೇಕ ಪ್ರಶಸ್ತಿಗಳನ್ನು ಸರ್ಕಾರ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ನೀಡಿದೆ. ಆದ್ರೆ ಅವೆಲ್ಲವೂ ಕೂಡ ಇಂದು ಅವರು ಮಾಡಿರುವ ಕೆಲಸದ ಬಗ್ಗೆ ಈ ಸಮಾಜಕ್ಕೆ ತಿಳಿ ಹೇಳುವಂತಹ ಪ್ರಯತ್ನ ಮಾಡಿವೆ ಎಂದು ಅನಿಸುತ್ತದೆ. ಕರ್ನಾಟಕ ಮತ್ತು ನಾವೆಲ್ಲರೂ ಕೂಡ ಬಹಳ ಹೆಮ್ಮೆಯಿಂದ ಅವರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಭಗವಂತ ಹೆಚ್ಚಿನ ಆಯುಷ್ಯ ನೀಡಿ ನಮ್ಮ ಜೊತೆಯಲ್ಲಿ ಇನ್ನೂ ಅನೇಕ ವರ್ಷಗಳು ಮಾದರಿಯಾಗಿ ಅವರು ನಮ್ಮೊಂದಿಗಿರಲಿ ಎಂದು ಆಶಿಸಿದ್ರು.

ಅಜ್ಜಿಯ ಸಂಪೂರ್ಣ ಜವಾಬ್ದಾರಿ ಪರಮೇಶ್ವರ್:
ಪರಮೇಶ್ವರ್ ಅವರಿಗೂ ಸಾಲುಮರದ ತಿಮಕ್ಕ ಅವರಿಗೂ ಅವಿನಾಭಾವ ಸಂಬಂಧವಿದೆ. ತಿಮ್ಮಕ್ಕ ಅವರ ನೆರವಿಗೆ ಪರಮೇಶ್ವರ್ ಅವರು ಬರದೇ ಇದ್ದಲ್ಲಿ ಇಷ್ಟೆಲ್ಲಾ ಸಾಧನೆ ಹಾಗೂ ಪ್ರಶಸ್ತಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಹಾಯ ಕೇಳದೇ ಇದ್ದರೂ ಅಜ್ಜಿಯವರನ್ನು ಮನೆಗೆ ಕರೆಸಿ ಅವರ ಸಂಕಷ್ಟಕ್ಕೆ ಸ್ಪಂದಿಸಿ ಬಹಳ ವರ್ಷಗಳಿಂದಲೂ ಅಜ್ಜಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ತಿಮ್ಮಕ್ಕರ ದತ್ತು ಪುತ್ರ ಹೇಳಿದ್ದಾರೆ.

ಪ್ರಶಸ್ತಿ ಬಂದ ಕೂಡಲೇ ನಾನು ಪರಮೇಶ್ವರ್ ಸರ್ ಅವರ ಮನೆಗೆ ಹೋಗಬೇಕು ಎಂದು ಮಧ್ಯರಾತ್ರಿ 1 ಗಂಟೆಗೆ ದೆಹಲಿಯಲ್ಲಿ ಹೇಳಿದ್ರು. ನಾವು ಹೊಗುವ ಮೊದಲೇ ಪರಮೇಶ್ವರ್ ಅವರು ಎಲ್ಲೇ ಇದ್ದರೂ ಮನೆಗೆ ಬಾರಪ್ಪ ಎಂದು ಫೋನ್ ಮಾಡಿದ್ದರು. ನಮ್ಮ ಕಷ್ಟ ಏನೇ ಇದ್ದರೂ ಪರನಮೇಶ್ವರ್ ಅವರೇ ನಮ್ಮ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು. ಒಟ್ಟಿನಲ್ಲಿ ಈ ಸಮಾಜದಲ್ಲಿ ಅಜ್ಜಿ ಇಂದು ಇಷ್ಟು ಆರೋಗ್ಯವಾಗಿದ್ದಾರೆ ಎಂಬುದಕ್ಕೆ ಪರಮೇಶ್ವರ್ ಅವರೇ ಕಾರಣರಾಗಿದ್ದು, ಅವರಿಗೆ ಯಾವತ್ತೂ ನಾವು ಅಭಾರಿಯಾಗಿರುತ್ತೇವೆ ಎಂದು ಹೇಳಿತ್ತಾ ಕೃತಜ್ಞತಾ ಪತ್ರವೊಂದನ್ನು ಡಿಸಿಎಂಗೆ ನೀಡಿದ್ರು.

Comments

Leave a Reply

Your email address will not be published. Required fields are marked *