ಫುಲ್ ಆ್ಯಕ್ಷನ್, ಎರಡೇ ಡೈಲಾಗ್‍ವುಳ್ಳ ಸಾಹೋ ಟೀಸರ್ ರಿಲೀಸ್

ಹೈದರಾಬಾದ್: ಭಾರತೀಯ ಸಿನಿ ಲೋಕದ ಬಹುನಿರೀಕ್ಷಿತ ‘ಸಾಹೋ’ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಹಿಂದಿ, ತೆಲಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು ಪ್ರಭಾಸ್ ಆ್ಯಕ್ಷನ್ ಸೀನ್ ಮಾಸ್ ಆಡಿಯನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಮವಾರ ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಚಿತ್ರದ ಪೋಸ್ಟರ್ ಹಾಕಿಕೊಂಡು ಜೂನ್ 13ರಂದು ಟೀಸರ್ ಬರಲಿದೆ ಎಂಬ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಇಂದು ಒಟ್ಟು ನಾಲ್ಕು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಎಂದಿನಂತೆ ಶ್ರದ್ಧಾ ಕಪೂರ್ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುವುದರ ಜೊತೆ ಆ್ಯಕ್ಷನ್ ದೃಶ್ಯಗಳಿಗೂ ಸೈ ಎನ್ನಿಸಿಕೊಂಡಿದ್ದಾರೆ.

ಟೀಸರ್ ಆರಂಭದಲ್ಲಿ ಕಾಣಿಸಿಕೊಳ್ಳುವ ಶ್ರದ್ಧಾ, ಖುಷಿ ಮತ್ತು ದುಃಖವನ್ನು ಹಂಚಿಕೊಳ್ಳಲು ನನಗೆ ಯಾರು ಇಲ್ಲ ಅಂತಾ ಹೇಳುತ್ತಾರೆ. ಪ್ರಭಾಸ್ ನಾನಿದ್ದೇನೆ ಎಂದು ಹೇಳುವ ಮೂಲಕ ನಾಯಕಿಯನ್ನು ಅಪ್ಪಿಕೊಳ್ಳುತ್ತಾರೆ. ಟೀಸರ್ ಕೊನೆಗೆ ಗುಂಡಿನ ಚಕಮಕಿ ನಡೆಯುವ ವೇಳೆ ನಾಯಕಿ ಯಾರು ಇವರೆಲ್ಲ ಕೇಳಿದಾಗ, ಪ್ರಭಾಸ್ ನನ್ನ ಅಭಿಮಾನಿಗಳು. ಯಾಕಿಷ್ಟು ವೈಲೆಂಟ್ ಅಂದಾಗ ಇವರೆಲ್ಲಾ ಡೈ ಹಾರ್ಡ್ ಫ್ಯಾನ್ ಎಂದು ಹೇಳಿ ಪ್ರಭಾಸ್ ಮುಗುಳ್ನಗುತ್ತಾರೆ.

ಈ ಬಾರಿಯ ಟೀಸರ್ ನಲ್ಲಿ ಚಿತ್ರದ ಪ್ರತಿಯೊಂದು ಪಾತ್ರವನ್ನು ತಂಡ ನೋಡುಗರಿಗೆ ಪರಿಚಯಿಸಿದೆ. ನೀಲ್ ನಿತಿನ್ ಮುಖೇಶ್, ಭೂಷನ್ ಕುಮಾರ್, ಜಾಕಿ ಶ್ರಾಫ್, ವೆನ್ನೆಲ್ಲಾ ಕಿಶೋರ್, ಮುರಳಿ ಶರ್ಮಾ, ಮಂದಿರಾ ಬೇಡಿ, ಮಹೇಶ್ ಮಂಜ್ರೇಕರ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಾಹೋ ಹೊಂದಿದೆ.

ಟೀಸರ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಪ್ರತಿ ದೃಶ್ಯಗಳ ಅಚ್ಚುಕಟ್ಟುತನ ನೋಡುಗರಲ್ಲಿ ಕುತೂಹಲವನ್ನು ಹುಟ್ಟುಹಾಕುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಚಿತ್ರ ಇದೇ ಆಗಸ್ಟ್ 15ರಂದು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Comments

Leave a Reply

Your email address will not be published. Required fields are marked *