ಅಂಧ ಗಾಯಕಿಯರಿಗೆ ಮನೆ- ಗೃಹ ಪ್ರವೇಶ ನೆರವೇರಿಸಿದ ಜಗ್ಗೇಶ್ ದಂಪತಿ

– ಗಾಯಕಿಯ ಕೈ ಹಿಡಿದು ಮನೆಗೆ ಬಲಗಾಲಿಡಿಸಿದ ಜಗ್ಗೇಶ್

ತುಮಕೂರು: ನವರಸನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಅವರು ಇಂದು ಅಂಧ ಸಹೋದರಿಯರ ಚಂದದ ಮನೆಯನ್ನು ಉದ್ಘಾಟಿಸಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋಗೆ ರತ್ನಮ್ಮ ಮತ್ತು ಮಂಜಮ್ಮ ಇಬ್ಬರೂ ಅಂಧ ಸಹೋದರಿಯರು ಬಂದಿದ್ದರು. ಇವರು ತಮ್ಮ ಸುಮಧುರ ಕಂಠಸಿರಿಯ ಮೂಲಕ ನಾಡಿನ ಜನತೆಯ ಮನಗೆದ್ದರು. ಇದೇ ವೇಳೆ ಅಂಧ ಸಹೋದರಿಯರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಅವರ ಕಷ್ಟವನ್ನು ಆಲಿಸಿದ ಜಗ್ಗೇಶ್ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಅವರು ಕೊಟ್ಟು ಭರವಸೆಯನ್ನು ಒಂದು ತಿಂಗಳಲ್ಲಿಯೇ ಜಗ್ಗೇಶ್ ಅಭಿಮಾನಿಗಳು ನೆರೆವೇರಿಸಿದ್ದಾರೆ. ಅಂದರೆ ಸೋದರಿಯರಿಗಾಗಿ ಒಂದು ಸುಂದರವಾದ ಮನೆಯನ್ನು ನಿರ್ಮಾಣ ಮಾಡಿದ್ದರು.

ಇಂದು ಅಂಧ ಗಾಯಕಿಯರ ಮನೆಯ ಗೃಹ ಪ್ರವೇಶ ನೆರೆವೇರಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ಗೃಹಪ್ರವೇಶ ನಡೆದಿದ್ದು, ನಟ ಜಗ್ಗೇಶ್ ದಂಪತಿಯಿಂದ ಉದ್ಘಾಟನೆ ಮಾಡಲಾಗಿದೆ. ಮೊದಲಿಗೆ ಮಧುಗಿರಿಗೆ ಹೋಗುವ ದಾರಿ ಮಧ್ಯೆ ಗೊರವನಹಳ್ಳಿ ದೇವಸ್ಥಾನಕ್ಕೆ ಜಗ್ಗೇಶ್ ದಂಪತಿ ಭೇಟಿ ಕೊಟ್ಟು ಪೂಜೆ ಮಾಡಿಸಿದ್ದರು. ನಂತರ ರಿಬ್ಬನ್ ಕಟ್ ಮಾಡುವ ಮೂಲಕ ಅಂಧ ಗಾಯಕಿಯರ ಚಂದದ ಮನೆಯನ್ನು ನಟ ಜಗ್ಗೇಶ್ ಉದ್ಘಾಟಿಸಿದರು.

 

ರಿಬ್ಬನ್ ಕಟ್ ಮಾಡಿದ ನಂತರ ಜಗ್ಗೇಶ್ ಗಾಯಕಿ ರತ್ನಮ್ಮರ ಕೈ ಹಿಡಿದುಕೊಂಡು ಬಲಗಾಲಿಡುವಂತೆ ಸೂಚಿಸಿದ್ದಾರೆ. ಜಗ್ಗೇಶ್ ಸೂಚಿಸಿದಂತೆ ರತ್ನಮ್ಮ ಬಲಗಾಲಿಟ್ಟು ಮನೆ ಪ್ರವೇಶ ಮಾಡಿದ್ದಾರೆ. ಜಗ್ಗೇಶ್ ಮತ್ತು ಅವರ ಅಭಿಮಾನಿಗಳು ಅಂಧ ಗಾಯಕಿ ಸಹೋದರಿಯರಿಗಾಗಿ ಡಿ.ವಿ.ಹಳ್ಳಿಯಲ್ಲಿ ಈ ಮನೆಯನ್ನು ನಿರ್ಮಾಣ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *