ಸಿದ್ದರಾಮಯ್ಯ ಮುಳುಗುತ್ತಿರುವ ಹಡಗು: ಸಚಿವ ಅಂಗಾರ

ಉಡುಪಿ: ಸಿದ್ದರಾಮಯ್ಯ ಏನು ಬೇಕಾದರೂ ಹೇಳಬಹುದು. ಮುಳುಗುವ ಹಡಗು ಸಿದ್ದರಾಮಯ್ಯ ಅವರು ಎಂದು ಮೀನುಗಾರಿಕಾ ಬಂದರು ಸಚಿವ ಎಸ್. ಅಂಗಾರ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಗೆ ಸ್ಪಷ್ಟತೆ ಇದೆ. ಉದ್ದೇಶ ವಿಚಾರ ಧಾರೆ ಇದೆ. ಸಿದ್ದರಾಮಯ್ಯ ಮುಳುಗುವ ಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಎಲ್ಲರೂ ಮುಳುಗಿದಂತೆ ಕಾಣುತ್ತಿರಬಹುದು ಎಂದು ಟಾಂಗ್ ಕೊಟ್ಟರು.

ಡಿ.ಕೆ. ಶಿವಕುಮಾರ್ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಇದ್ದು, ರೆಸಾರ್ಟ್‍ನಲ್ಲಿ ಇಬ್ಬರು ಬಿಜೆಪಿಯ ನಾಯಕರು ಡಿಕೆಶಿ ಜೊತೆ ಚರ್ಚೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯಿಸಿ, ಅಪಪ್ರಚಾರ ಏನು ಬೇಕಾದರೂ ಮಾಡಬಹುದು. ನಾಳೆ ನಾನು ಕೂಡ ಡಿಕೆಶಿ ಜೊತೆಗಿದ್ದೇನೆ ಎಂದು ಹೇಳಬಹುದು. ಅಂಗಾರ ಏನು ಎಂದು ಜನಗಳಿಗೆ ಗೊತ್ತುಂಟು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡೋದು ಬೇಡ. ಯತ್ನಾಳ್ ಏನಾದರೂ ಹೇಳಬಹುದು, ಅದನ್ನು ನಂಬಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಘಟನೆಯ ವ್ಯವಸ್ಥೆಯಲ್ಲಿ ನಾವೆಲ್ಲ ಅಧಿಕಾರ ಪಡೆದಿದವರು. ನಾವು ಹೇಗೆ ನಡೆದುಕೊಳ್ಳಬೇಕು ಎಂದು ಮೊದಲು ಆಲೋಚಿಸಬೇಕು. ನಾವೇ ಅನಗತ್ಯ ವಿವಾದ ಮಾಡಿದರೆ ಹೊರ ಹೋಗಬೇಕಾಗುತ್ತದೆ ಎಂದು ಸಲಹೆ ನೀಡಿದರು.

ನಮ್ಮ ತಪ್ಪುಗಳಿಗೆ ಸಂಘಟನೆ ಹೊಣೆಯಾಗುವುದಿಲ್ಲ. ಸಂಘಟನೆಗೆ ನಿಷ್ಠರಾಗಿದ್ದರೆ, ಸಂಘಟನೆ ನಮ್ಮ ಕೈ ಬಿಡುವುದಿಲ್ಲ. ಯಾರಾದರೂ ಸಂಘಟನೆ ಕೈಬಿಡುವಂತೆ ವರ್ತಿಸಿದರೆ ನಾವು ಹೊಣೆಗಾರರಲ್ಲ ಎಂದರು. ಇದನ್ನೂ ಓದಿ: ನಾರಾಯಣ ಗುರುಗಳ ಬಗ್ಗೆ ಪ್ರಧಾನಿ ಸೇರಿದಂತೆ ಎಲ್ಲರಿಗೂ ಗೌರವ ಇದೆ: ಎಸ್.ಅಂಗಾರ

ಉಸ್ತುವಾರಿ ಹಂಚಿಕೆಯ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅಂಗಾರ, ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ. ಎಲ್ಲವು ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು. ಉಸ್ತುವಾರಿ ಸಿಗದಿದ್ದರೂ ಚುನಾಯಿತ ಪ್ರತಿನಿಧಿಯಾಗಿ ನನ್ನ ಕೆಲಸ ನಾನು ಮಾಡಬೇಕು. ನನ್ನ ಕ್ಷೇತ್ರದ ಕೆಲಸದ ಜೊತೆ ಹೆಚ್ಚುವರಿಯಾಗಿ ಉಸ್ತುವಾರಿ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಗಣರಾಜ್ಯೋತ್ಸವ – ಶಾಲೆಯಲ್ಲಿ ವಿದ್ಯುತ್ ಅವಘಡ, ವಿದ್ಯಾರ್ಥಿ ಸಾವು

Comments

Leave a Reply

Your email address will not be published. Required fields are marked *