ಯುದ್ಧ ಪರಿಸ್ಥಿತಿ ತಿಳಿಯಾದ್ರೆ ಮತ್ತೆ ಉಕ್ರೇನ್ ಹೋಗುತ್ತೇನೆ: ವೈದ್ಯಕೀಯ ವಿದ್ಯಾರ್ಥಿ

ಚಾಮರಾಜನಗರ: ಯುದ್ದಗ್ರಸ್ತ ಉಕ್ರೇನ್‍ನಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಒಡೆಯರ ಪಾಳ್ಯದ ಸಿದ್ದೇಶ್ ಸುರಕ್ಷಿತವಾಗಿ ತವರಿಗೆ ಮರಳಿ ಬಂದಿದ್ದಾರೆ. ಉಕ್ರೇನ್‍ನ ಕೀವ್ ನಗರದಲ್ಲಿ ದ್ವಿತೀಯ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಸಿದ್ದೇಶ್ ಹಂಗೇರಿ ಮೂಲಕ ದೆಹಲಿಗೆ ಬಂದು ಅಲ್ಲಿಂದ ಹುಟ್ಟೂರಿಗೆ ಆಗಮಿಸಿದ್ದಾರೆ.

ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಿದ್ದೇಶ್ ಯುದ್ಧದ ಪರಿಸ್ಥಿತಿ ತಿಳಿಯಾದರೆ ಮತ್ತೆ ವಿದ್ಯಾಭ್ಯಾಸಕ್ಕೆ ಉಕ್ರೇನ್‍ಗೆ ಹೋಗುತ್ತೇನೆ ಎಂದಿದ್ದಾರೆ.

ನಾನು 3-4 ದಿನ ಹಾಸ್ಟೆಲ್‍ನ ಬಂಕರ್‍ನಲ್ಲಿದ್ದೆ. ನಾವು ಇದ್ದ ಸ್ಥಳದಿಂದ 30 ಕಿ.ಮೀ ದೂರದಲ್ಲೇ ಬಾಂಬ್ ಬೀಳುತ್ತಿದ್ದವು. ಯುದ್ದದಿಂದ ಎಲ್ಲಾ ವಿದ್ಯಾರ್ಥಿಗಳು ಹೆದರಿದ್ದೆವು. ಕೀವ್‍ನಿಂದ ರೈಲು ಹಾಗೂ ಬಾಡಿಗೆ ಕಾರಿನ ಮೂಲಕ ಹಂಗೇರಿಯ ಬುಡಾಪೆಸ್ಟ್ ನಗರ ತಲುಪಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ನೆರವಿನಿಂದ ವಿಮಾನದಲ್ಲಿ ದೆಹಲಿಗೆ ಬಂದೆವು ಎಂದು ವಿವರಿಸಿದರು. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!

ಯುದ್ದ ನಡೆಯುವ ಬಗ್ಗೆ ಒಂದು ವಾರ ಮುಂಚೆಯೇ ಮಾಹಿತಿ ಬಂದಿತ್ತು. ಅದರೆ ಆಫ್‍ಲೈನ್ ಕ್ಲಾಸ್ ಮುಂದುವರಿಸಿದ್ದರಿಂದ ಅಲ್ಲಿಯೇ ಇರಬೇಕಾಯ್ತು ಎಂದು ಅಲ್ಲಿದ್ದ ಪರಿಸ್ಥಿತಿ ಬಗ್ಗೆ ವಿವರಿಸಿದರು.

ಸಿದ್ದೇಶ್ ಆಗಮನದಿಂದ ಸಂತಸಗೊಂಡಿರುವ ಪೋಷಕರು ದೇವರ ದಯೆಯಿಂದ ಮಗ ಮನೆಗೆ ಬಂದಿದ್ದಾನೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕೊಡಿಸೋಕೆ ಒಂದರಿಂದ ಒಂದೂವರೆ ಕೋಟಿ ರೂ. ಬೇಕು. ಅಲ್ಲಿ 30 ಲಕ್ಷ ರೂ. ಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಯುತ್ತೆ. ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?

ಯುದ್ಧ ನಿಂತ ಬಳಿಕ ಮತ್ತೆ ಓದಲು ಉಕ್ರೇನ್‍ಗೆ ಹೋಗುತ್ತೇನೆ ಎಂದು ಮಗ ಹೇಳುತ್ತಿದ್ದಾನೆ. ಈ ವಿಚಾರ ಅವನ ಧೈರ್ಯಕ್ಕೆ ಬಿಟ್ಟಿದ್ದು. ನಮ್ಮ ಆಶೀರ್ವಾದ ಸದಾ ಇರುತ್ತದೆ. ಸರ್ಕಾರ ಹಾಗೂ ಹನೂರಿನ ಬಿಜೆಪಿ ಮುಖಂಡ ವೆಂಕಟೇಶ್ ನಮ್ಮ ಜೊತೆಯಲ್ಲಿದ್ದುಕೊಂಡು ಮಗನನ್ನು ಕರೆತರುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಅವರಿಗೆಲ್ಲ ಧನ್ಯವಾದ ತಿಳಿಸುತ್ತೇವೆ ಎಂದು ಸಿದ್ದೇಶ್ ಪೋಷಕರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *