ಬಡವರ ಸಾಲಕ್ಕೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಸುಮ್ಮನಿದ್ದಾರೆ ಯಾಕೆ: ಟಿ.ಜೆ ಅಬ್ರಹಂ

ಉಡುಪಿ: ದಾವೂದ್ ಯಾವತ್ತೂ ನಗು ನಗ್ತಾ ಇರ್ತಾನೆ. ಆತ ಅಳೋದನ್ನು ನಾನು ನೋಡಿಲ್ಲ. ಸಚಿವ ಪ್ರಮೋದ್ ಮಧ್ವರಾಜ್ ಕೂಡಾ ದಾವುದ್ ರೀತಿ ನಗ್ತಾರೆ ಎಂದು ಆರ್‍ಟಿಐ ಹೋರಾಟಗಾರ ಟಿ.ಜೆ ಅಬ್ರಹಂ ಹೇಳಿಕೆ ನೀಡಿದ್ದಾರೆ.

ಮಲ್ಪೆ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 1.1 ಕೋಟಿ ರೂಪಾಯಿ ಆಸ್ತಿಪತ್ರ ಅಡವಿಟ್ಟು 193 ಕೋಟಿ ರೂಪಾಯಿ ಸಚಿವರು ಸಾಲ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣ ಮಾಡಿದ್ದಾರೆ ಅಂತ ದಾಖಲೆ ಕೊಟ್ಟರೂ ಮಾಧ್ಯಮದ ಮುಂದೆ ನಗ್ತಾರೆ ಅಂತ ಟೀಕಿಸಿದರು.

ಪ್ರಮೋದ್ ಮಧ್ವರಾಜ್ ಅವರೇ ನೀವು ನಿರಪರಾಧಿ ಎಂದು ದಾಖಲೆ ಬಿಡುಗಡೆ ಮಾಡಿ. ಮುಚ್ಚುಮರೆ ಮಾಡುವುದ್ಯಾಕೆ? ನಾನು ಸವಾಲು ಹಾಕುತ್ತಿದ್ದೇನೆ. ದಾಖಲೆ ಕೊಡಿ ಎಂದು ಒತ್ತಾಯಿಸಿದ್ದಾರೆ. ಸತ್ಯ ಹೊರ ತೆಗೆಯಲು ಹೊರಟರೆ ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲು ಹೊರಡ್ತಾರೆ. ನಾನು ಯಾವುದನ್ನೂ ಕೇರ್ ಮಾಡಲ್ಲ ಅಂತ ತಿರುಗೇಟು ನೀಡಿದರು. ಇದನ್ನೂ ಓದಿ: 193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

ಸಿಂಡಿಕೇಟ್ ಬ್ಯಾಂಕ್ ಸಚಿವ ಪ್ರಮೋದ್ ಪರವಾಗಿ ನಿಂತಿದೆ. ಬ್ಯಾಂಕ್ ಅಧಿಕಾರಿಗಳು ಕಾನೂನು ಬಾಹಿರವಾಗಿ ಸಾಲ ನೀಡಿದ್ದಾರೆ. ರಾಜ್ಯದಲ್ಲಿ ಸಾಲ ಮಾಡಿ ಸತ್ತಿರೋ ರೈತರು ಎರಡು ಲಕ್ಷಕ್ಕೆ ಹೆಚ್ಚು ಬ್ಯಾಂಕಿಂದ ತೆಗೆದುಕೊಂಡಿಲ್ಲ. ಶ್ರೀಮಂತರಿಗೆ ಕೋಟಿ ಕೋಟಿ, ರೈತರು ಲಕ್ಷ ಸಾಲ ಮಾಡಿದ್ರೆ ಬ್ಯಾಂಕುಗಳು ಬೆನ್ನತ್ತುತ್ತದೆ. ಬಡವರು ಸಾಲ ಪಡೆದರೆ ಸತಾಯಿಸುವ ಬ್ಯಾಂಕ್ ಅಧಿಕಾರಿಗಳು ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

ಬ್ಯಾಂಕ್ ಡಿಜಿಎಂ ಮಾಧ್ಯಮಗಳ ಮೂಲಕ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಬ್ಯಾಂಕ್ ಮೇಲೆ ಐದು ಕೋಟಿ ರೂ. ಮಾನ ನಷ್ಟ ಮೊಕದ್ದಮೆ ಹಾಕುತ್ತೇನೆ. ಕೇಂದ್ರ ಸರ್ಕಾರ ಸರಿಯಾಗಿಯೇ ತನಿಖೆ ಮಾಡುತ್ತದೆ ಎಂದು ಹೇಳಿದರು.

ಚುನಾವಣೆಗೂ ಈ ಕೇಸಿಗೂ ಸಂಬಂಧವಿಲ್ಲ. ಯಡಿಯೂರಪ್ಪನವರ ಮೇಲೂ ಕೇಸು ಹಾಕಿದ್ದೇನೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಮೇಲೂ ಕೇಸ್ ಇದೆ ಎಂದು ಸ್ಪಷ್ಟನೆ ನೀಡಿದರು.

Comments

Leave a Reply

Your email address will not be published. Required fields are marked *