ಸಚಿವ ಪ್ರಮೋದ್ ಮಧ್ವರಾಜ್ ಗೆ 30 ದಿನ ಗಡುವು ನೀಡಿದ ಆರ್‌ಟಿಐ ಕಾರ್ಯಕರ್ತ ಟಿಜೆ ಅಬ್ರಾಹಂ

ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರು ಹಾಕಿರುವ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಅವರಿಗೆ ಒಂದು ತಿಂಗಳು ಅವಕಾಶ ಕೊಡುತ್ತೇನೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ ಎಂದು ಉಡುಪಿ ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ), ಟಿ.ಜೆ ಅಬ್ರಾಹಂ ಸವಾಲು ಹಾಕಿದ್ದಾರೆ.

ಇಂದು ಉಡುಪಿ ಪ್ರೆಸ್ ಕ್ಲಬ್‍ನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರಿಗೆ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಲು ಒಂದು ತಿಂಗಳು ಗಡುವು ನೀಡಿದಾಗಿ ತಿಳಿಸಿದರು. ಇದೇ ವೇಳೆ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಸಚಿವರು ನೀಡಿರುವ ಲೀಗಲ್ ನೋಟಿಸನ್ನು ನಾನು ಸ್ವಾಗತಿಸುತ್ತೇನೆ. ನೋಟಿಸ್ ನೋಡಿ ನನಗೆ ಬಹಳ ಸಂತೋಷವಾಗಿದೆ. ಒಂದು ತಿಂಗಳ ಒಳಗೆ ನನ್ನ ವಿರುದ್ಧ ದೂರು ದಾಖಲಿಸಲಿ. ನ್ಯಾಯಾಲಯದಲ್ಲಿ ಸಚಿವರು ಮಾಡಿರುವ ಎಲ್ಲಾ ಅಕ್ರಮಗಳ ಮಾಹಿತಿಯ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಒಂದು ವೇಳೆ ಸಚಿವರು ದೂರು ದಾಖಲಿಸದಿದ್ದರೇ ನಾನೇ ಅವರನ್ನು ಕೋರ್ಟ್ ಗೆ ಎಳೆಯುತ್ತೇನೆ. ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದ ಬಳಿಕ ಪ್ರತಿಯೊಂದು ದಾಖಲೆ ಹೊರಗೆ ಬರುತ್ತದೆ. ಮೂವತ್ತು ದಿನದಲ್ಲಿ ಸಾಬೀತುಪಡಿಸದಿದ್ದರೆ ಕೇಸು ದಾಖಲು ಮಾಡುತ್ತೇನೆ. ಆದಷ್ಟು ಬೇಗ ಕೇಸು ದಾಖಲು ಮಾಡಿ ಎಂದು ಸಲಹೆ ನೀಡಿದರು.

2014-2015 ರಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿದ ದಾಖಲೆಯಲ್ಲಿ 40 ಕೋಟಿ ರೂ. ಆಸ್ತಿ ದಾಖಲೆ ತೋರಿಸಿದ್ದಾರೆ. ತಾಯಿ, ಪತ್ನಿ, ಮಗಳ ಆಸ್ತಿಯನ್ನು ಅದು ಒಳಗೊಂಡಿದೆ. ಆದರೆ 193 ಕೋಟಿ ರೂ. ಸಾಲ ಪಡೆಯುವಷ್ಟು ಆಸ್ತಿ ಸಚಿವರಿಗೆ ಎಲ್ಲಿಂದ ಬಂತು ಎಂದು ಲೋಕಾಯುಕ್ತಕ್ಕೆ ಸಲ್ಲಿಸಿದ ಕಡತ ಹಿಡಿದು ಪ್ರಶ್ನಿಸಿದರು. ಸಚಿವರು ಕ್ಷಮೆ ಕೇಳಲು ಮೂರು ದಿನ ಗಡುವು ಕೊಟ್ಟಿದ್ದಾರೆ. ನಾನು ಎರಡನೇ ದಿನಕ್ಕೆ ಉಡುಪಿಗೆ ಬಂದಿದ್ದೇನೆ. ಕಾನೂನು ರೀತಿಯಲ್ಲಿ ನಾನು ಸರಿಯಿದ್ದೇನೆ. 1.10 ಕೋಟಿ ಬೆಲೆಬಾಳುವ ಆಸ್ತಿ ಅಡವಿಟ್ಟು, 193 ಕೋಟಿ ಸಾಲ ಪಡೆದಿರುವ ಸಚಿವರು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿಕೊಂಡು ಮೋಸ ಮಾಡಿದ್ದಾರೆ. ನನ್ನ ಹೋರಾಟದ ಹಿಂದೆ ಯಾರ ಕೈವಾಡವೂ ಇಲ್ಲ. ರಾಜ್ಯದ ಜನರಿಗಾಗಿ, ಸತ್ಯ ಹೊರಗೆಡವಲು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *