ಆರ್‍ಎಸ್‍ಎಸ್, ಎಬಿವಿಪಿ ಪರ ಇರೋ ಕಾಲೇಜುಗಳ ಪಟ್ಟಿ ಕೊಡಿ: ವೇಣುಗೋಪಾಲ್

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಆರ್‍ಎಸ್‍ಎಸ್, ಎಬಿವಿಪಿ ಪರ ಇರುವ ಕಾಲೇಜುಗಳ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದೆ. ಈ ಮೂಲಕ ಮಾಜಿ ಪ್ರಧಾನಿ ಇಂದಿರಾಗಾಂಧಿ ವಿರೋಧಿಗಳನ್ನು ಕಟ್ಟಿ ಹಾಕಲು ಬಳಸುತ್ತಿದ್ದ ತಂತ್ರಗಳನ್ನು ಅನುಸರಿಸಲು ಸರ್ಕಾರ ಮುಂದಾಗುತ್ತಿದೆ.

ಹೌದು. ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯ ಬಳಿಕ ಆರ್‍ಎಸ್‍ಎಸ್, ಎಬಿವಿಪಿ ಪರ ಇರುವ ಕಾಲೇಜುಗಳ ಲಿಸ್ಟ್ ಕೇಳಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

ಸಭೆಯಲ್ಲಿ ಯೂತ್ ಕಾಂಗ್ರೆಸ್ ಸಾಧನೆ ಏನು? ಎಬಿಬಿವಿಪಿ ಹೇಗೆ ಸಕ್ರೀಯವಾಗಿದೆ ಎನ್ನುವ ಬಗ್ಗೆ ವೇಣುಗೋಪಾಲ್ ಪ್ರಶ್ನೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸದಸ್ಯರು, ಆರ್‍ಎಸ್‍ಎಸ್, ಎಬಿವಿಪಿ ಪರ ಇರುವ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ನಮಗೆ ಈ ಕಾಲೇಜುಗಳ ಆವರಣ ಪ್ರವೇಶಿಸಲು ಆಗುತ್ತಿಲ್ಲ. ಸಾಕಷ್ಟು ಕಾಲೇಜುಗಳಲ್ಲಿ ಪ್ರಾಂಶುಪಾಲರು ಆರ್‍ಎಸ್‍ಎಸ್, ಎಬಿವಿಪಿ ಪರ ಇದ್ದಾರೆ. ಅಂತಹ ಕಾಲೇಜುಗಳನ್ನ ಯುವ ಕಾಂಗ್ರೆಸ್ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ.

ಕಾಂಗ್ರೆಸ್ ವಿದ್ಯಾರ್ಥಿ ಘಟಕಗಳು ನಡೆಸುವ ಕಾರ್ಯಕ್ರಮಗಳು, ಹೋರಾಟಕ್ಕೆ ಕಾಲೇಜುಗಳು ಯಾವುದೇ ಬೆಂಬಲ ನೀಡದ ಕಾರಣ ಸಂಘಟನೆ ಕಷ್ಟವಾಗುತ್ತಿದೆ ಎಂದು ಯುವ ಕಾಂಗ್ರೆಸ್ ಮತ್ತು ಎನ್‍ಎಸ್‍ಯುಐ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಅಳಲು ಆಲಿಸಿದ ಬಳಿಕ ವೇಣುಗೋಪಾಲ್ ಆರ್‍ಎಸ್‍ಎಸ್, ಎಬಿವಿಪಿ ಪರ ಇರುವ ಕಾಲೇಜುಗಳ ಪಟ್ಟಿಯನ್ನು ನೀಡುವಂತೆ ಕೇಳಿದ್ದಾರೆ. ಲಿಸ್ಟ್ ಕೈಸೇರಿದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *