ಸ್ವಿಗ್ಗಿ‌ ಕಂಪನಿಯ 7 ಕೋಟಿ ಹಣ ಬೆಟ್ಟಿಂಗ್‌ಗೆ ಹಾಕಿ ವಂಚಿಸಿದ್ದವ ಅರೆಸ್ಟ್!

ಬೆಂಗಳೂರು: ಸ್ವಿಗ್ಗಿ (Swiggy) ಕಂಪನಿಯ ಹಣದಲ್ಲಿ (Money) ಆನ್‌ಲೈನ್ ಬೆಟ್ಟಿಂಗ್ (Online Betting) ಆಡಿ, ಸುಮಾರು 7 ಕೋಟಿ ರೂ. ವಂಚಿಸಿದ (Fraud Case) ಉದ್ಯೋಗಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶ್ರೀಕಾಂತ್‌ (23) ಎಂದು ಗುರುತಿಸಲಾಗಿದೆ. ಒಂದು ವರ್ಷದಿಂದ ಆರೋಪಿ ಕಂಪನಿಯ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಅರ್ನಸ್ಟ್ ಅಂಡ್ ಯಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಪ್ರತಿ ತಿಂಗಳು ಸ್ವಿಗ್ಗಿ ಖಾತೆಯಿಂದ 1 ರಿಂದ 2 ಕೋಟಿ ರೂ. ಹಣವನ್ನು ಎಗರಿಸುತ್ತಿದ್ದ ಎಂದು ತಿಳಿದು ಬಂದಿದೆ.

ಕಂಪನಿಯ ಹಿರಿಯ ಅಧಿಕಾರಿ ಶೋರಿ ರಾಜನ್‌ ನೀಡಿದ ದೂರಿನ ಪ್ರಕಾರ, ಅರ್ನಸ್ಟ್ ಅಂಡ್ ಯಂಗ್ ಕಂಪನಿ ಸ್ವಿಗ್ಗಿ ಸೇರಿದಂತೆ ಅನೇಕ ಕಂಪನಿಗಳಿಗೆ ಲೆಕ್ಕಪತ್ರ ನಿರ್ವಹಣೆ ಸೇವೆ ಒದಗಿಸುತ್ತಿದೆ. ಅದರಂತೆ ಕಂಪನಿಯ ಸಹಾಯಕ ಲೆಕ್ಕಧಿಕಾರಿ ಶ್ರೀಕಾಂತ್‌ ಅವರನ್ನ ಸ್ವಿಗ್ಗಿ ಕಂಪನಿಯ ಕಚೇರಿಯ ವಿದ್ಯುತ್‌ ಬಿಲ್‌ ಕಟ್ಟಲು ನೇಮಕ ಮಾಡಿಕೊಳ್ಳಲಾಗಿತ್ತು. ಆದ್ರೆ ಶ್ರೀಕಾಂತ್‌ ಪ್ರತಿ ತಿಂಗಳು ಸ್ವಿಗ್ಗಿ ಬ್ಯಾಂಕ್‌ ಖಾತೆಯಿಂದ 1 ಕೋಟಿ ರೂ. ನಿಂದ 2 ಕೋಟಿ ರೂ. ವಂಚಿಸಿದ್ದಾನೆ ಎಂದು ತಿಳಿಸಿದ್ದಾರೆ.

ಶ್ರೀಕಾಂತ್‌ ಅವರು 2024ರ ಜೂನ್‌ನಿಂದ ಡಿಸೆಂಬ‌ರ್ ತಿಂಗಳ ಅವಧಿಯಲ್ಲಿ ಒಟ್ಟು 6,86,51,160 ರೂ.ಗಳನ್ನ ಬಿಟಿಎನ್‌ಎಕ್ಸ್‌ಚೆಂಜ್ 247.ಕಾಂ (BetinExchange247.com) ಕಂಪನಿಗೆ ಹಾಕಿರುವುದು ಸ್ವಿಗ್ಗಿ ಕಂಪನಿಯ ಲೆಕ್ಕಪರಿಶೋಧನೆ ವೇಳೆ ಗೊತ್ತಾಗಿದೆ. ಈ ವಿಷಯವನ್ನು ಆಡಳಿತ ಮಂಡಳಿ ಹಿರಿಯ ಸಿಬ್ಬಂದಿ ಗಮನಕ್ಕೆ ತಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಳಿಕ ಈ ಬಗ್ಗೆ ಶ್ರೀಕಾಂತ್ ಅವರನ್ನು ವಿಚಾರಿಸಿದಾಗ, ಬಿಟಿಎನ್ ಕಂಪನಿಯು ಈ ಹಣವನ್ನು ಬೆಟ್ಟಿಂಗ್ ಆ್ಯಪ್‌ನಲ್ಲಿ ಠೇವಣಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಮ್ಮ ಕಂಪನಿಗೆ ನಂಬಿಕೆ ದ್ರೋಹ ಮಾಡಿ, 7 ಕೋಟಿ ರೂ. ವಂಚನೆ ಮಾಡಿರುವ ಶ್ರೀಕಾಂತ್ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.