ಡಿಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿತು 7.5 ಕೋಟಿ ರೂ. ಹಣ: ಮುಂದೆ ಈ ನಾಯಕರ ಮನೆ ಮೇಲೆ ದಾಳಿ?

ನವದೆಹಲಿ: ಗುಜರಾತ್ ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ್ದ ರಾಜ್ಯ ಸರ್ಕಾರ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಶಾಸಕರಿಗೆ ರಾಜಾತಿಥ್ಯದ ನೇತೃತ್ವ ವಹಿಸಿದ್ದ ಇಂಧನ ಸಚಿವ ಡಿಕೆ ಶಿವಕುಮಾರ್ ಐಟಿ ದಾಳಿಗೆ ಗುರಿಯಾಗಿದ್ದಾರೆ.

ಬುಧವಾರ ಬೆಳ್ಳಂಬೆಳಗ್ಗೆ ಗುಜರಾತ್ ಶಾಸಕರು ತಂಗಿರುವ ಬಿಡದಿಯ ಈಗಲ್‍ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ, ಬೆಂಗಳೂರಿನ ಸದಾಶಿವನಗರದ ನಿವಾಸ, ಕನಕಪುರದ ಹುಟ್ಟೂರು ದೊಡ್ಡಹಾಲಹಳ್ಳಿ ನಿವಾಸ, ಸಹೋದರ-ಸಂಸದ ಡಿ.ಕೆ. ಸುರೇಶ್ ತೋಟದ ಮನೆ, ಡಿಕೆಶಿ ಅತ್ಯಾಪ್ತ ಮತ್ತು ಮೇಲ್ಮನೆ ಸದಸ್ಯ ಎಸ್.ರವಿ, ದೆಹಲಿಯಲ್ಲಿನ ಆಪ್ತರು, ಸ್ನೇಹಿತರು, ಮೈಸೂರಿನ ಅತ್ತೆ ಮನೆಯೂ ಸೇರಿದಂತೆ ಸುಮಾರು 40 ಕಡೆ ಐಟಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸುವ ಮೂಲಕ ರಾಜ್ಯದ ಪವರ್‍ಫುಲ್ ಮಿನಿಸ್ಟರ್ ಡಿಕೆಶಿಗೆ ಬಿಗ್ ಶಾಕ್ ನೀಡಿದ್ದಾರೆ.

ಬೆಳಗ್ಗೆ 12 ಗಂಟೆಗೆ ಸದಾಶಿವನಗರ ನಿವಾಸಕ್ಕೆ ಡಿಕೆಶಿ ಅವರನ್ನ ಕರೆದುತಂದ ಐಟಿ ಅಧಿಕಾರಿಗಳು ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಈಗಲ್‍ಟನ್ ರೆಸಾರ್ಟ್‍ನಲ್ಲಿ ಐಟಿ ವಿಚಾರಣೆ ವೇಳೆ ಡಿಕೆಶಿ ಹರಿದು ಹಾಕಿದರು ಎನ್ನಲಾದ ದಾಖಲೆಯಲ್ಲಿ ಮತ್ತಷ್ಟು ನಾಯಕರ ಹೆಸರು ಇದೆ ಎನ್ನಲಾಗಿದೆ. ಇವರೆಲ್ಲರ ಮೇಲೆಯೂ ದಾಳಿ ನಡೆಯುವ ಸಾಧ್ಯತೆ ಇದೆ. ಇನ್ನು, ಜಾರಿ ನಿರ್ದೇಶನಾಲಯ ಎಂಟ್ರಿಯಾಗುತ್ತಿದ್ದು, ಐಟಿಯಿಂದ ಮಾಹಿತಿ ಪಡೆದು ಎಫ್‍ಐಆರ್ ದಾಖಲಿಸಿದ್ದೇ ಆದಲ್ಲಿ ಡಿಕೆಶಿ ಅರೆಸ್ಟ್ ಆಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರ 2 ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ 7.5 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *