ಕೆಟ್ಟ ರಸ್ತೆಯಿಂದ ಬೆಂಗಳೂರು ತೊರೆಯಲು ಮುಂದಾದ 10,900 ಕೋಟಿ ಮೌಲ್ಯದ BlackBuck ಕಂಪನಿ

ಬೆಂಗಳೂರು: ಭಾರತದ ಪ್ರಮುಖ ಟ್ರಕ್‌ ಡಿಜಿಟಲ್ ಟ್ರ್ಯಾಕಿಂಗ್‌ ಪ್ಲಾಟ್‌ಫಾರ್ಮ್‌ ಬ್ಲ್ಯಾಕ್‌ಬಕ್ (BlackBuck) ಕಂಪನಿ ಕೆಟ್ಟ ರಸ್ತೆಯ ಕಾರಣ ನೀಡಿ ಬೆಂಗಳೂರನ್ನು (Bengaluru) ತೊರೆಯುವ ಎಚ್ಚರಿಕೆ ನೀಡಿದೆ.

ಸುಮಾರು ಒಂದು ದಶಕದ ಕಾರ್ಯಾಚರಣೆಯ ನಂತರ ಬೆಳ್ಳಂದೂರಿನಲ್ಲಿರುವ ತನ್ನ ಔಟರ್ ರಿಂಗ್ ರೋಡ್ (ORR) ಕಚೇರಿಯನ್ನು ತೊರೆಯುವುದಾಗಿ 10,900 ಕೋಟಿ ರೂ. ಮೌಲ್ಯದ ಬ್ಲ್ಯಾಕ್‌ಬಕ್ ಕಂಪನಿಯ ಸಿಇಒ ರಾಜೇಶ್ ಯಬಜಿ (Rajesh Kumar Yabaji) ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು ಬೆಳ್ಳಂದೂರು ಕಳೆದ 9 ವರ್ಷಗಳಿಂದ ನಮ್ಮ ಕಚೇರಿ + ಮನೆ ಆಗಿತ್ತು. ಆದರೆ ಇನ್ನು ಮುಂದೆ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ. ನಾವು ಇಲ್ಲಿಂದ ಹೊರಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ನನ್ನ ಸಹೋದ್ಯೋಗಿಗಳಿಗೆ ಸರಾಸರಿ ಪ್ರಯಾಣ 1.5 ಗಂಟೆ ಆಗುತ್ತಿದೆ. ಹೊಂಡಗಳು ಮತ್ತು ಧೂಳಿನಿಂದ ರಸ್ತೆಗಳು ತುಂಬಿದ್ದು, ಅವುಗಳನ್ನು ಸರಿಪಡಿಸುವ ಯಾವ ಹೊಣೆಗಾರಿಕೆ ಕಾಣುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿ 5 ವರ್ಷಗಳಲ್ಲಿ ಬದಲಾವಣೆಯಾಗುವುದು ಅಸಾಧ್ಯ ಎಂದು ಬೆಂಗಳೂರು ತೊರೆಯುವುದಕ್ಕೆ ಕಾರಣ ನೀಡಿದ್ದಾರೆ.  ಇದನ್ನೂ ಓದಿ:  ಡಿವಿಎಸ್‌ ಬ್ಯಾಂಕ್‌ ಖಾತೆ ಹ್ಯಾಕ್‌ – 3 ಲಕ್ಷ ದೋಚಿದ ಸೈಬರ್‌ ಕಳ್ಳರು

ರಾಜೇಶ್‌ ಯಬಜಿ ಅವರ ಪೋಸ್ಟ್‌ಗೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಮಾಹಿತಿ ತಂತ್ರಜ್ಞಾನ ಖಾತೆಯ ಸಚಿನ ನಾರಾ ಲೋಕೇಶ್‌ ಪ್ರತಿಕ್ರಿಯಿಸಿ, ನಿಮ್ಮ ಕಂಪನಿಯನ್ನು ವೈಜಾಗ್‌ಗೆ ಸ್ಥಳಾಂತರಿಸಬಹುದೇ? ನಾವು ಭಾರತದ ಟಾಪ್ 5 ಸ್ವಚ್ಛ ನಗರಗಳಲ್ಲಿ ಒಂದೆಂದು ರೇಟಿಂಗ್ ಪಡೆದಿದ್ದೇವೆ. ಅತ್ಯುತ್ತಮ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಮಹಿಳೆಯರಿಗೆ ಸುರಕ್ಷಿತ ನಗರವೆಂದು ರೇಟಿಂಗ್ ಪಡೆದಿದ್ದೇವೆ. ದಯವಿಟ್ಟು ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು ಆಹ್ವಾನ ನೀಡಿದ್ದಾರೆ.

2015 ರಲ್ಲಿ ಬ್ಲ್ಯಾಕ್‌ಬಕ್ ಸ್ಥಾಪನೆಯಾಗಿದ್ದು ಲಾಜಿಸ್ಟಿಕ್‌ ಸೇವೆ ನೀಡುತ್ತಿದೆ. ಗೂಡ್ಸ್‌ ಕಳುಹಿಸುವವರು ಮತ್ತು ಟ್ರಕ್‌ ನಿರ್ವಹಕರ  ಜೊತೆ ಸಂಪರ್ಕಕ್ಕೆ ವೇದಿಕೆ ಕಲ್ಪಿಸಿಕೊಡುತ್ತಿದೆ. ಟ್ರಕ್‌ಗಳ ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಫ್ಲೀಟ್ ನಿರ್ವಹಣೆಗಾಗಿ ಟೆಲಿಮ್ಯಾಟಿಕ್ಸ್ ಸೇವೆ ಕೊಡುತ್ತಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿಯ AI ವಿಡಿಯೋ ತೆಗೆದುಹಾಕಿ: ಕಾಂಗ್ರೆಸ್‌ಗೆ ಪಾಟ್ನಾ ಹೈಕೋರ್ಟ್ ಸೂಚನೆ

ಭಾರತದ ಸುಮಾರು ಮೂರನೇ ಒಂದು ಭಾಗದಷ್ಟು ಟ್ರಕ್‌ಗಳು ಪ್ರತಿ ತಿಂಗಳು ಈ ವೇದಿಕೆಯನ್ನು ಬಳಸುತ್ತಿವೆ. ಕಂಪನಿಯು 2024 ರ ಕೊನೆಯಲ್ಲಿ 4,818 ಕೋಟಿ ರೂ. ಮೌಲ್ಯದ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಬಿಡುಗಡೆ ಮಾಡಿತ್ತು.

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 143.6 ಕೋಟಿ ರೂ. ಆದಾಯ ದಾಖಲಾಗಿರುವುದಾಗಿ ಕಂಪನಿ ಹೇಳಿದೆ. ವರ್ಷದಿಂದ ವರ್ಷಕ್ಕೆ 56% ಬೆಳವಣಿಗೆ ಸಾಧಿಸಿದ್ದು 33.7 ಕೋಟಿ ರೂ. ನಿವ್ವಳ ಲಾಭಗಳಿಸಿದೆ.