ಎಸಿಬಿ ದಾಳಿ ವೇಳೆ ಪಾರ್ಕಿಂಗ್ ಕಾರಿನಲ್ಲಿ ಹಣ, ಪೈಪಿನಲ್ಲಿ ಚಿನ್ನ ಪತ್ತೆ!

ಬೆಂಗಳೂರು: ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮೇಲಿನ ದಾಳಿ ಮುಂದುವರಿದಿದ್ದು, ಅಪಾರ ಪ್ರಮಾಣದ ಹಣ, ಚಿನ್ನ ಮತ್ತು ದಾಖಲಾತಿಗಳು ಪತ್ತೆಯಾಗುತ್ತಲೇ ಇದೆ.

ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಚೀಫ್ ಎಂಜಿನಿಯರ್ ಟಿ.ಆರ್.ಸ್ವಾಮಿ ಮತ್ತು ಬಿಡಿಎ ಅಧೀಕ್ಷಕ ಅಭಿಯಂತರ ಎನ್.ಜಿ. ಗೌಡಯ್ಯ ಅವರ ಮನೆಯ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಮಾಡಿದ್ದ ವೇಳೆ ಪತ್ತೆಯಾಗಿದ್ದ ದಾಖಲಾತಿ, ಹಣವನ್ನು ಲೆಕ್ಕ ಹಾಕುತ್ತಿದ್ದಾರೆ. ಇನ್ನೊಂದು ಕಡೆ ದಾಳಿಯನ್ನು ಮುಂದುವರಿಸಿದ್ದು, ಈಗ ಸ್ವಾಮಿ ನಿವಾಸದ ಗ್ರಿಲ್ಸ್ ಮತ್ತು ಪೈಪ್ ಗಳಲ್ಲಿ ಚಿನ್ನ ಮತ್ತು ಹಣದ ಬ್ಯಾಗ್ ಪತ್ತೆಯಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು!

ಎಸಿಬಿ ಅಧಿಕಾರಿಗಳು ಮನೆಗೆ ಬಂತ ತಕ್ಷಣ ಸ್ವಾಮಿ, 14ನೇ ಮಹಡಿಯಲ್ಲಿರುವ ಮನೆಯಿಂದ ಬ್ಯಾಗ್ ಬಿಸಾಡಿದ್ದರು. ಆ ಬ್ಯಾಗಿನಲ್ಲಿ 500 ಮತ್ತು 2000 ರೂ. ಮುಖಬೆಲೆಯ 10 ಲಕ್ಷ ರೂ. ಹಣ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್‍ನಲ್ಲಿರುವ ಫ್ಲ್ಯಾಟ್ ನ ಬೇಸ್ ಮೆಂಟ್ ನಲ್ಲಿ ಎರಡು ಕಾರುಗಳನ್ನು ನಿಲ್ಲಿಸಲಾಗಿತ್ತು. ಆ ಕಾರಿನಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿಯೂ ಹಣ ಮತ್ತು ದಾಖಲಾತಿಗಳು ಪತ್ತೆಯಾಗಿವೆ. ಇದುವರೆಗೂ ಒಟ್ಟು 4.75 ಕೋಟಿ ನಗದು ಮತ್ತು 1.5 ಕೆಜಿಗೂ ಹೆಚ್ಚಿ ಚಿನ್ನಾಭರಣ ಹಾಗೂ ಬೆಳ್ಳಿ ಪತ್ತೆಯಾಗಿದೆ.

ಎಸಿಬಿ ಐಜಿಪಿ ಚಂದ್ರಶೇಖರ್ ಮಾಧ್ಯಮಗಳ ಜೊತೆ ಮಾತನಾಡಿ, ಬಸವೇಶ್ವರನಗರದಲ್ಲಿ ಗೌಡಯ್ಯ ಮನೆ ಮತ್ತು ಮಲ್ಲೇಶ್ವರಂನ ಟಿ.ಆರ್.ಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ. ಎಸಿಬಿ ಅಧಿಕಾರಿಗಳ ಎರಡು ತಂಡದಿಂದ ಏಕಕಾಲಕ್ಕೆ ದಾಳಿ ನಡೆಸಲಾಗುತ್ತಿದ್ದು, ಅತ್ಯಾಪ್ತರ ಮನೆಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ದಾಳಿ ವೇಳೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ಸಂಜೆ ವೇಳೆಗೆ ಸಂಪೂರ್ಣ ಪರಿಶೀಲನೆ ನಂತರ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *