ಮಂಡ್ಯದಲ್ಲಿ ರೌಡಿ ಶೀಟರ್ ಅಶೋಕ್ ಪೈ ಹತ್ಯೆಗೆ ಯತ್ನ

ಮಂಡ್ಯ: ರೌಡಿ ಶೀಟರ್ ಅಶೋಕ್ ಪೈ ಮನೆಗೆ ನುಗ್ಗಿದ 20 ಯುವಕರ ತಂಡ ಕೊಲೆಗೆ ಯತ್ನ ನಡೆಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿ ಗ್ರಾಮದ ಇಂದು ಬೆಳಗಿನ ಜಾವ ನಡೆದಿದೆ.

ರೌಡಿಗಳಾದ ಜಡೇಜಾ ರವಿ, ಚೀರನಹಳ್ಳಿ ಶಂಕರ, ಚೀರನಹಳ್ಳಿ ಶಿವರಾಂ ಸೇರಿದಂತೆ ಹಲವರ ಹತ್ಯೆಯಲ್ಲಿ ಅಶೋಕ್ ಪೈ ಹೆಸರು ಕೇಳಿ ಬಂದಿತ್ತು. ಆದರೆ ಅಶೋಕ್ ಪೈ ಇತ್ತೀಚಿಗಷ್ಟೇ ಎಲ್ಲ ಆರೋಪದಿಂದ ಮುಕ್ತನಾಗಿ ಬಿಡುಗಡೆಯಾಗಿದ್ದ. ಬಿಡುಗಡೆ ನಂತರ ತನ್ನ ಪತ್ನಿ, ಮಗಳೊಂದಿಗೆ ಮಾದರಹಳ್ಳಿಯಲ್ಲಿ ಕೆಲ ದಿನಗಳಿಂದ ವಾಸವಾಗಿದ್ದನು.

ಅಶೋಕ್ ಪೈ ಮಲಗಿದ್ದ ವೇಳೆ ಸುಮಾರು 20-25 ಯುವಕರ ತಂಡ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಏಕಾಏಕಿ ದಾಳಿ ನಡೆಸಿದ್ದಾರೆ. ತಕ್ಷಣ ಎಚ್ಚೆತ್ತ ಅಶೋಕ್ ಪೈ ತನ್ನ ಮಗಳೊಂದಿಗೆ ಮನೆಯ ಅಟ್ಟವನ್ನ ಹತ್ತಿ ಸಿಕ್ಕ ಸಿಕ್ಕ ವಸ್ತುಗಳಿಂದ ಪ್ರತಿ ದಾಳಿ ನಡೆಸಿದ್ದಾನೆ. ಅದನ್ನೂ ಲೆಕ್ಕಿಸದೇ ಪೈ ಮೇಲೆ ದಾಳಿ ಮಾಡಲು ಮುಂದಾದಾಗ, ತಲೆಯಿಂದ ಮನೆಯ ಶೀಟ್ ಮುರಿದು ಸಹಾಯಕ್ಕೆ ಕೂಗಿಕೊಂಡಿದ್ದಾನೆ. ತಕ್ಷಣ ಅಕ್ಕಪಕ್ಕದ ಮನೆಯವರು ಅಶೋಕ್ ಪೈ ಸಹಾಯಕ್ಕೆ ಬಂದಾಗ ದುಷ್ಕರ್ಮಿಗಳು ಬಂದಷ್ಟೇ ವೇಗವಾಗಿ ಪರಾರಿಯಾಗಿದ್ದಾರೆ.

ಸುಮಾರು ಅರ್ಧ ಗಂಟೆ ನಡೆದ ಕಾಳಗದಲ್ಲಿ ಅಶೋಕ್ ಪೈ ದೇಹಕ್ಕೆ ಸಣ್ಣ ಪುಟ್ಟ ಗಾಯಗಳಾವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆ.ಎಂ.ದೊಡ್ಡಿ ಪೊಲೀಸರು ಒಂದು ಮೊಬೈಲ್, ಲಾಂಗ್, ಖಾರದ ಪುಡಿ ವಶಪಡಿಸಿಕೊಂಡಿದ್ದಾರೆ. ಸದ್ಯ ಅಶೋಕ್ ಪೈಗೆ ರಕ್ಷಣೆ ನೀಡಿದ್ದಾರೆ. ದಾಳಿಯ ಹಿಂದಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *