51 ಪುಟ ಡೆತ್ ನೋಟ್ ಬರೆದು ಪ್ರೆಸ್‍ಕ್ಲಬ್ ನಲ್ಲೇ ವಿಷ ಕುಡಿದ ರೌಡಿ ನಾಗ!

ಬೆಂಗಳೂರು: ಸಹೋದರನ ಪತ್ನಿ ಮತ್ತು ಅವರ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದ ಆರೋಪದಡಿ ಬಂಧಕ್ಕೆ ಒಳಗಾಗಿದ್ದ ರೌಡಿ ನಾಗರಾಜ್, ಬೇಲ್ ಪಡೆದು ಹೊರಬಂದ ಕೂಡಲೇ ಭಾರೀ ಹೈಡ್ರಾಮಾ ಮಾಡಿದ್ದಾನೆ.

ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ ರೌಡಿ ನಾಗರಾಜ್, ನನಗೆ ಸಚಿವರಾದ ಕೆಜೆ ಜಾರ್ಜ್ ಮತ್ತು ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್‍ರಿಂದ ಮೋಸ ಆಗಿದೆ. ಅಷ್ಟೇ ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ. ಪೊಲೀಸರನ್ನು ಉಪಯೋಗಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾನೆ.

ಬೆಂಗಳೂರು ಬಿಟ್ಟು ಹೋಗುವಂತೆ ಒತ್ತಡ ಹಾಕಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ 81 ಜನರ ವಿರುದ್ಧ ಆರೋಪ ಮಾಡಿದ್ದು, ಹೀಗಾಗಿ ವಿಷ ಸೇವಿಸ್ತಿದ್ದೀನಿ ಎಂದು ರೌಡಿ ನಾಗರಾಜ್ ಎಲ್ಲರೆದುರೇ ವಿಷ ಕುಡಿದಿದ್ದಾನೆ. ಈ ವೇಳೆ ವಿಷ ಕುಡಿಯುದನ್ನು ತಡೆಯೋಕೆ ಯತ್ನಿಸಿದ ವೇಳೆ ದೊಡ್ಡ ಮಟ್ಟದಲ್ಲಿ ಅಬ್ಬರಿಸಿಬಿಟ್ಟಿದ್ದಾನೆ.ವಿಷ ಸೇವಿಸಿದ ಹಿನ್ನೆಲೆಯಲ್ಲಿ ರೌಡಿ ನಾಗರಾಜ್ ನನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೌಡಿ ನಾಗರಾಜ್ ವಿಷ ಕುಡಿಯುವ ಮೊದಲು 51 ಪುಟಗಳ ಡೆತ್ ನೋಟ್ ಬರೆದುಕೊಂಡು ಬಂದಿದ್ದ. ಈ ಡೆತ್ ನೋಟ್ ನಲ್ಲಿ ಗಾಂಧಿನಗರದಿಂದ ಸ್ಪರ್ಧಿಸಿ ಎಂಎಲ್‍ಎ ಆಗೋಕೆ ಯತ್ನಿಸಿದ್ದೆ. ಈ ಬಾರಿ ಚುನಾವಣೆಗೆ ನಿಂತರ ದಿನೇಶ್ ಗುಂಡೂರಾವ್ ಸೋಲುತ್ತಿದ್ದರು. ಗುಂಡೂರಾವ್ ಜೊತೆ ಪೊಲೀಸ್ ಅಧಿಕಾರಿಗಳು ಕುಮ್ಮಕ್ಕಿನಿಂದಾಗಿ ನನ್ನ ಮೇಲೆ 9 ಸುಳ್ಳು ಕೇಸ್ ದಾಖಲಿಸಲಾಗಿದೆ. ಇದರಿಂದಾಗಿ ನನ್ನ ಜೀವನ ಹಾಳಾಯ್ತು ಎಂದು ಆರೋಪಿಸಿದ್ದಾನೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ದಿನೇಶ್ ಅವರ ಪತ್ನಿ ತಬು ಗುಂಡೂರಾವ್, ಸಚಿವ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅವರ ಪತ್ನಿ ಅಂಜಲಿ, ಅಜಯ್ ಹಿಲೋರಿ ಸೇರಿದಂತೆ ಎಸ್‍ಐ, ಎಎಸ್‍ಐ, ಪೊಲೀಸ್ ಪೇದೆವರೆಗೂ ಒಟ್ಟು 83 ಹೆಸರು ಉಲ್ಲೇಖಿಸಿದ್ದಾನೆ. ನನ್ನ ಸಾವಿಗೆ ಈ 83 ಮಂದಿ ಕಾರಣರೆಂದು 51 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ನಾಗರಾಜ್ ನನ್ನು ಐಸಿಯುನಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಪತ್ನಿ ಲಕ್ಷ್ಮಿ ಮತ್ತು ಸಂಬಂಧಿಕರು ಭೇಟಿ ನೀಡಿದ್ದಾರೆ.

https://www.youtube.com/watch?v=7ji-VBZk5CI

Comments

Leave a Reply

Your email address will not be published. Required fields are marked *