ಬೆಂಗಳೂರಿನಲ್ಲಿ ಮತ್ತೆ ಪುಂಡರ ಅಟ್ಟಹಾಸ – ಸಿಕ್ಕಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ ಹಣ ವಸೂಲಿ

– ಫೀಲ್ಡಲ್ಲಿ ಹೆಸರು ಮಾಡಬೇಕು ಅಂತ ಪುಂಡಾಟ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪುಡಿರೌಡಿಗಳ ಗ್ಯಾಂಗ್‌ವೊಂದು ಅಟ್ಟಹಾಸ ಮೆರೆದಿದೆ. ಒಂದೇ ದಿನದಲ್ಲಿ ಹೆಸರು ಮಾಡಬೇಕು ಅಂತಾ ಲಾಂಗ್ (Lang) ಹಿಡಿದು ರಸ್ತೆಬದಿ ಪಾರ್ಕ್‌ ಮಾಡಿದ್ದ ವಾಹನಗಳ ಮೇಲೆ ಬೀಸಿ ಪುಂಡಾಟ ಮೆರೆದಿದೆ. ಇದು ಸ್ಥಳೀಯರಲ್ಲೂ ಆತಂಕ ಮೂಡುವಂತೆ ಮಾಡಿದೆ.

ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಕಾರ್‌ ಗ್ಲಾಸ್‌ ಒಡೆದಿದ್ದ (Car Glass Broken) ಈ ಗ್ಯಾಂಗ್‌ ಬಳಿಕ ಮಾದನಾಯಕನಹಳ್ಳಿಯ ಮಾಗಡಿ ರೋಡ್ ಲಿಮಿಟ್ಸ್‌ನಲ್ಲಿ ಚಾಲಕನ ಮೇಲೆ ಲಾಂಗ್‌ ಬೀಸಿದೆ. ಮೊದಲಿಗೆ ಲಾರಿ ಗ್ಲಾಸ್‌ ಹೊಡೆದಿರುವ ಈ ಗ್ಯಾಂಗ್‌, ಚಾಲಕ ಮಲಗಿರೋದನ್ನ ಗಮನಿಸಿ ಹಣಕ್ಕಾಗಿ ಬೆದರಿಕೆ ಹಾಕಿದೆ. ಹಣ ತೆಗೆದುಕೊಡುವಷ್ಟರಲ್ಲಿ ಲಾಂಗ್‌ ಬೀಸಿ ಕೈ ಕೂಡ ಕಟ್‌ ಮಾಡಿದೆ. ಬಳಿಕ ಮೊಬೈಲ್‌ ಹಾಗೂ 5 ಸಾವಿರ ರೂ. ಹಣ ದೋಚಿ ಪರಿಯಾಗಿದೆ ಪುಂಡರ ಗ್ಯಾಂಗ್‌.

ಇಷ್ಟಕ್ಕೇ ಸುಮ್ಮನಾಗದ ಈ ಗ್ಯಾಂಗ್‌ ದೊಡ್ಡಬಳ್ಳಾಪುರದ ಬಳಿ ಕೂಡ ಲಾಂಗ್ ಬೀಸಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬೆದರಿಕೆ ಹಾಕಿದೆ. ಸಿಕ್ಕ ಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡಿದೆ. ಆಟೋದಲ್ಲಿ ಬಂದವರಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

ಕುಡಿದ ಮತ್ತಿನಲ್ಲಿ ಸುಮಾರು 20 ವಾಹನಗಳ ಗ್ಲಾಸ್​​ಗಳನ್ನ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅನ್ನಪೂರ್ಣೇಶ್ವರಿ ನಗರದ ಮುದ್ದಿನಪಾಳ್ಯದ ಬಳಿ ಐದಾರು ವಾಹನಗಳ ಗ್ಲಾಸ್ ಗಳನ್ನ ಪುಂಡರು ಹೊಡೆದು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಎ.ಪಿ ನಗರ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಮತ್ತು ದೊಡ್ಡಬಳ್ಳಾಪುರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.