ಕೆಬಿಸಿ ಕಾರ್ಯಕ್ರಮದಲ್ಲಿ ಸಿಂಧೂರ ಸೇನಾ ತಂಡ – ಬಿಗ್‌ಬಾಸ್‌ಗೂ ಕಳಿಸಿಬಿಡಿ ಅಂತ ಟೀಕೆ

ನವದೆಹಲಿ: ಆಪರೇಷನ್‌ ಸಿಂಧೂರದ (Operation Sindoor) ವೇಳೆ ಸುದ್ದಿಗೋಷ್ಠಿ ನಡೆಸಿದ್ದ ಸೈನ್ಯದ ಮೂವರು ಮಹಿಳಾ ಅಧಿಕಾರಿಗಳು ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಇದಾಗಲೇ 17ನೇ ಸೀಸನ್ ತಲುಪಿದೆ. ಸ್ವಾತಂತ್ರ ದಿನದ ಅಂಗವಾಗಿ ವಿಶೇಷ ಎಪಿಸೋಡ್ ನಡೆಯಲಿದೆ. ಈ ವೇಳೆ ಆಪರೇಷನ್ ಸಿಂಧೂರದ ಸಮಯದಲ್ಲಿ ಪಾಕಿಸ್ತಾನದ ಎದೆ ನಡುಗಿಸಿದ್ದ ಭಾರತದ ವೀರ ವನಿತೆಯರಾದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದಿಯೋಸ್ಥಾಲಿ ಭಾಗವಹಿಸಲಿದ್ದಾರೆ.


ಈ ಎಪಿಸೋಡ್‌ನ ಪ್ರೊಮೋ ಬಿಡುಗಡೆ ಮಾಡಲಾಗಿದ್ದು. ಈ ಮೂವರನ್ನು ಪರಿಚಯಿಸುತ್ತಲೇ ಅಮಿತಾಬ್ ಬಚ್ಚನ್ ಭಾರತ್ ಮಾತಾ ಕೀ ಜೈ ಎಂದಿದ್ದಾರೆ. ಇನ್ನು ಇದು ವಿವಾದಕ್ಕೆ ಕಾರಣವಾಗಿದ್ದು. ಪ್ರಚಾರ ಮತ್ತು ರಾಜಕೀಯ ಲಾಭಕ್ಕಾಗಿ ಸೇನಾಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದೆ ಬಿಗ್‌ ಬಾಸ್‌ಗೂ ಕಳುಹಿಸಿಕೊಡಿ ಎಂದು ಕೆಲವು ನೆಟ್ಟಿಗರು ಕಾಲೆಳೆದಿದ್ದಾರೆ.