ಕುಡಿದು ಮಲಗುತ್ತಿದ್ದಂತೆ ನಗ್ನ ಫೋಟೋ ಕ್ಲಿಕ್ – ರೂಮ್‍ಮೇಟ್‍ಗಳ ಬೆದರಿಕೆಯಿಂದ ನೇಣಿಗೆ ಶರಣು

ಮುಂಬೈ: ರೂಮ್‍ಮೇಟ್‍ಗಳ ಬ್ಲಾಕ್‍ಮೇಲ್‍ಗೆ ನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ವಾಂಗಾವ್‍ನಲ್ಲಿ ನಡೆದಿದೆ.

ಆರೋಪಿಗಳ ಮೊಬೈಲ್ ಫೋನಿನಲ್ಲಿ ಮೃತ ಯುವಕ ನಗ್ನ ಫೋಟೋಗಳು ಪತ್ತೆಯಾಗಿದ್ದು, ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಯುವಕ ಮತ್ತು ಆರೋಪಿಗಳು ಬೊಯಿಸಾರ್ ನಲ್ಲಿರುವ ಔಷಧಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಮೂವರು ಒಟ್ಟಿಗೆ ವಾಸಿಸುತ್ತಿದ್ದರು.

ಕೆಲವು ವಾರಗಳ ಹಿಂದೆ ಮೂವರು ಕುಡಿಯುತ್ತಿದ್ದಾಗ ಮೃತ ಯುವಕ ನಿದ್ದೆ ಮಾಡಿದ್ದಾನೆ. ಮರುದಿನ ಯುವಕ ಎಚ್ಚರಗೊಂಡಿದ್ದು, ಕಳೆದ ರಾತ್ರಿ ನಡೆದಿದ್ದನ್ನು ನೆನಪಿಸಿಕೊಂಡಿದ್ದಾನೆ. ಇದೇ ವೇಳೆ ರೂಮ್‍ಮೇಟ್ಸ್ ಆತನ ಬೆತ್ತಲೆ ಫೋಟೋವನ್ನು ತೋರಿಸಿದ್ದಾರೆ. ಆಗ ಮೃತ ಯುವಕ ಇದನ್ನು ತಮಾಷೆಯಾಗಿ ತೆಗೆದುಕೊಂಡು ಜೋಕ್ಸ್ ಸಾಕು ಫೋಟೋ ಡಿಲೀಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಆದರೆ ಆರೋಪಿಗಳು ಫೋಟೋ ಡಿಲೀಟ್ ಮಾಡದೇ ಅದನ್ನೇ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿದ್ದಾರೆ. ನಾವು ಕೇಳಿದಷ್ಟು ಹಣ ಕೊಡಲಿಲ್ಲ ಎಂದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಇದರಿಂದ ಬೇಸತ್ತ ಯುವಕ ಅವರಿಬ್ಬರು ಕೆಲಸಕ್ಕೆ ತೆರಳಿದ ಬಳಿಕ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ರೂಮ್‍ಮೇಟ್‍ಗಳಿಬ್ಬರ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತ ಯುವಕ ಫೋಟೋಗಳನ್ನು ಡಿಲೀಟ್ ಮಾಡುವಂತೆ ಅವರಿಬ್ಬರಿಗೆ ಹಲವು ಬಾರಿ ಮೆಸೇಜ್ ಮಾಡಿ ಬೇಡಿಕೊಂಡಿದ್ದಾನೆ. ಆದರೂ ಅವರು ಫೋಟೋಗಳನ್ನು ಡಿಲೀಟ್ ಮಾಡಿಲ್ಲ. ಸದ್ಯಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *