ಶತಕ ಸಿಡಿಸಿ ಕ್ರಿಕೆಟ್‌ ದೇವರ ದಾಖಲೆ ಸರಿಗಟ್ಟಿದ ಶರ್ಮಾ – ಕೊಹ್ಲಿ ದಾಖಲೆಯೂ ಉಡೀಸ್‌

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿಂದು ಮಾಜಿ ನಾಯಕ ರೋಹಿತ್‌ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದ ಶರ್ಮಾ 125 ಎಸೆತಗಳಲ್ಲಿ ಅಜೇಯ 121 ರನ್‌ ಸಿಡಿಸಿದ್ದಾರೆ. ಈ ಶತಕದೊಂದಿಗೆ ಕ್ರಿಕೆಟ್‌‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ಅಪರೂಪದ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ. ಜೊತೆಗೆ ವಿರಾಟ್‌ ಕೊಹ್ಲಿ ಅಪರೂಪದ ದಾಖಲೆಯನ್ನೂ ಮುರಿದಿದ್ದಾರೆ.

ಹೌದು. ಸರಣಿಯ ಕೊನೆಯ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸಿದ್ದ ಸಚಿನ್‌ ತೆಂಡಲ್ಕೂರ್‌ ಅವರ ದಾಖಲೆಯನ್ನ ಸರಿಗಟ್ಟಿದರು. ಜೊತೆಗೆ 8 ಶತಕ ಸಿಡಿಸಿದ್ದ ಕಿಂಗ್‌ ಕೊಹ್ಲಿಯ ದಾಖಲೆಯನ್ನು ಮುರಿದರು. ಆಸೀಸ್‌ ವಿರುದ್ಧ ಕೊಹ್ಲಿ 51 ಇನ್ನಿಂಗ್ಸ್‌ಗಳಲ್ಲಿ 8 ಶತಕ ಸಿಡಿಸಿದ್ರೆ, ತೆಂಡೂಲ್ಕರ್‌ 70 ಇನ್ನಿಂಗ್ಸ್‌ಗಳಲ್ಲಿ 9 ಶತಕ ಸಿಡಿಸಿದ್ದರು. ಆದ್ರೆ ಹಿಟ್‌ ಮ್ಯಾನ್‌ ಶರ್ಮಾ ಕೇವಲ 49 ಇನ್ನಿಂಗ್ಸ್‌ಗಳಲ್ಲೇ ಆಸೀಸ್‌ ವಿರುದ್ಧ 9 ಶತಕ ಸಿಡಿಸಿ ದಾಖಲೆ ಬರೆದರು.

ಆಸ್ಟ್ರೇಲಿಯಾ ವಿರುದ್ಧ ಅತಿಹೆಚ್ಚು ಶತಕ ಸಿಡಿಸಿದ ಟಾಪ್‌-5 ಬ್ಯಾಟರ್ಸ್‌
* ರೋಹಿತ್‌ ಶರ್ಮಾ – 49 ಇನ್ನಿಂಗ್ಸ್‌ – 9 ಶತಕ
* ಸಚಿನ್‌ ತೆಂಡೂಲ್ಕರ್‌ – 70 ಇನ್ನಿಂಗ್ಸ್‌ – 9 ಶತಕ
* ವಿರಾಟ್‌ ಕೊಹ್ಲಿ – 53 ಇನ್ನಿಂಗ್ಸ್‌ – 8 ಶತಕ
* ಡೆಸ್ಮಂಡ್ ಹೇನ್ಸ್ – 64 ಇನ್ನಿಂಗ್ಸ್‌ – 6 ಶತಕ
* ವಿವಿಯನ್‌ ರಿಚರ್ಡ್ಸ್‌ – 54 ಇನ್ನಿಂಗ್ಸ್‌ – 3 ಶತಕ

ರೋ-ಕೊ ಆರ್ಭಟಕ್ಕೆ ಕಾಂಗರೂ ಪಡೆ ಕಂಗಾಲು
ಸಿಡ್ನಿ ಅಂಗಳದಲ್ಲಿಂದು ನಡೆದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ಕೇವಲ 38.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ರೊಹಿತ್‌ ಬೊಂಬಾಟ್‌ ಶತಕ
ಆರಂಭಿಕನಾಗಿ ಕಣಕ್ಕಿಳಿದ 38 ವರ್ಷ ವಯಸ್ಸಿನ ರೋಹಿತ್‌ ಶರ್ಮಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ಅಜೇಯ 121‌ ರನ್‌ (125 ಎಸೆತ, 13 ಬೌಂಡರಿ, 3 ಸಿಕ್ಸರ್)‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ ಅಜೇಯ 74 ರನ್‌ (81 ಎಸೆತ, 7 ಬೌಂಡರಿ) ಚಚ್ಚಿದರು. ಆಸೀಸ್‌ ಪರ ಜೋಶ್‌ ಹೇಜಲ್ವುಡ್‌ ಒಂದು ವಿಕೆಟ್‌ ಪಡೆದರು.

ಮೊದಲು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸುವ ಉತ್ಸಾಹದಿಂದ ಬ್ಯಾಟಿಂಗ್‌ ಆಯ್ದುಕೊಂಡಿತು. ಮೊದಲ ವಿಕೆಟ್‌ಗೆ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ 9.2 ಓವರ್‌ಗಳಲ್ಲಿ 61 ರನ್‌ ಕಲೆಹಾಕಿತ್ತು. ಈ ವೇಳೆ ಡೇಂಜರಸ್‌ ಬ್ಯಾಟರ್‌ ಟ್ರಾವಿಸ್‌ ಆಟಕ್ಕೆ ಸಿರಾಜ್‌ ಬ್ರೇಕ್‌ ಹಾಕಿದರು. ನಂತರದಲ್ಲಿ ಮ್ಯಾಟ್ ರೆನ್ಶಾ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲೇ 236 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್‌ ಮಾರ್ಷ್‌ 41 ರನ್‌, ಟ್ರಾವಿಸ್‌ ಹೆಡ್‌ 29 ರನ್‌, ಮ್ಯಾಥಿವ್‌ ಶಾರ್ಟ್‌ 30 ರನ್‌, ಮ್ಯಾಟ್‌ ರೆನ್‌ಶಾ 56 ರನ್‌ (58 ಎಸೆತ, 2 ಬೌಂಡರಿ), ಅಲೆಕ್ಸ್‌ ಕ್ಯಾರಿ 24 ರನ್‌, ಕೂಪರ್‌ ಕಾನ್ನೋಲ್ಲಿ 23 ರಮ್‌, ಮಿಚೆಲ್‌ ಓವೆನ್‌ 1 ರನ್‌, ಮಿಚೆಲ್‌ ಸ್ಟಾರ್ಕ್‌ 2 ರನ್‌, ನಥಾನ್‌ ಎಲ್ಲಿಸ್‌ 16 ರನ್‌, ಆಡಂ ಝಂಪಾ ಅಜೇಯ 2 ರನ್‌ ಗಳಿಸಿದ್ರೆ ಜೋಶ್‌ ಹ್ಯಾಜಲ್‌ವುಡ್‌ ಶೂನ್ಯ ಸುತ್ತಿದರು.

ಟೀಂ ಇಂಡಿಯಾ ಪರ ಹರ್ಷಿತ್‌ ರಾಣಾ 4 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌, ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.