ಪಂಜಾಬ್‍ | ಪಟಿಯಾಲದಲ್ಲಿ 7 ರಾಕೆಟ್ – ಮದ್ದುಗುಂಡುಗಳು ಪತ್ತೆ

ಚಂಢೀಗಢ: ಪಂಜಾಬ್‍ನ (Punjab) ಪಟಿಯಾಲದಲ್ಲಿ (Patiala) 7 ರಾಕೆಟ್‍ಗಳು (Rocket) ಹಾಗೂ ಮದ್ದುಗುಂಡುಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಪಟಿಯಾಲದ ರಾಜ್‍ಪುರ ರಸ್ತೆಯ ಕಸ ವಿಲೇವಾರಿ ಮಾಡುವ ಸ್ಥಳದಲ್ಲಿ ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜುರಿ ವ್ಯಾಪಾರಿ ಇವುಗಳನ್ನು ಈ ಸ್ಥಳದಲ್ಲಿ ಎಸೆದು ಹೋಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಹೆಚ್ಚಿನ ತನಿಖೆಗಾಗಿ ಸೇನಾ ಪಡೆಗೆ ಮಾಹಿತಿ ನೀಡಿದ್ದೇವೆ ಎಂದು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ 2022ರಲ್ಲಿ ಪಟಿಯಾಲದಿಂದ 200 ಕಿ.ಮೀ ದೂರದಲ್ಲಿರುವ ತರ್ನ್ ತರನ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಪ್ರೊಪೆಲ್ಡ್ ಗ್ರಾನೆಡ್ ದಾಳಿ ನಡೆದಿತ್ತು. ಇದಾದ 7 ತಿಂಗಳ ಬಳಿಕ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸರ ಗುಪ್ತಚರ ಪ್ರಧಾನ ಕಚೇರಿ ಮೇಲೂ ದಾಳಿ ನಡೆದಿತ್ತು.