ದರೋಡೆ ಮಾಡಿ ಮನೆ ಮಾಲೀಕರಿಗೆ ಖರ್ಚಿಗೆ ಹಣ ಕೊಟ್ರು

BRIBE

– ದರೋಡೆ ಬಳಿಕ ಮನೆಯವರ ಕಾಲಿಗೆ ಬಿದ್ರು

ಲಕ್ನೋ: ದರೋಡೆ ಮಾಡಲು ಹೋದ ಮನೆಯಿಂದ ಹೊರಡುವ ಮುನ್ನ ಆ ಮನೆಯ ಹಿರಿಯರ ಕಾಲಿಗೆ ನಮಸ್ಕಾರ ಮಾಡಿ, ಇನ್ನು 6 ತಿಂಗಳೊಳಗೆ ನಿಮ್ಮ ಹಣವನ್ನು ವಾಪಾಸ್ ನೀಡುತ್ತೇವೆ ಎಂದು ಭರವಸೆ ನೀಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನಲ್ಲಿ ನಡೆದಿದೆ.

ದರೋಡೆ ಮಾಡಲೆಂದು  ಆ ಮನೆಗೆ ಬಂದಿದ್ದರು. ಆ ಮನೆಯಲ್ಲಿ ವಾಸವಾಗಿದ್ದ ಅಜ್ಜ-ಅಜ್ಜಿಯ ಎದುರು ಮಚ್ಚು, ಪಿಸ್ತೂಲ್ ಹಿಡಿದು ಮನೆಯಲ್ಲಿದ್ದ ವಸ್ತುವನ್ನೆಲ್ಲ ದೋಚಿಕೊಂಡ ಅವರು ಮನೆಯಿಂದ ಹೊರಡುವ ಮುನ್ನ ಅವರಿಬ್ಬರ ಕಾಲಿಗೂ ಬಿದ್ದು ಆಶೀರ್ವಾದ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ ಇನ್ನು 6 ತಿಂಗಳೊಳಗೆ ದೋಚಿದ ಹಣ, ಆಭರಣವನ್ನು ವಾಪಾಸ್ ತಂದುಕೊಡುವುದಾಗಿಯೂ ಹೇಳಿ ಹೋಗಿದ್ದಾರೆ. ಹಾಗೆ ಹೋಗುವ ಮುನ್ನ ಅಜ್ಜ-ಅಜ್ಜಿಗೆ ಖರ್ಚಿಗೆಂದು 500 ರೂ. ಕೂಡ ನೀಡಿ ಹೋಗಿದ್ದಾರೆ.

ಹಿರಿಯ ಉದ್ಯಮಿಗಳಾದ ಸುರೇಂದ್ರ ವರ್ಮ ಮತ್ತು ಅವರ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ದರೋಡೆಕೋರರು ಮನೆಯೊಳಗೆ ನುಗ್ಗಿದ್ದಾರೆ. ಸೋಮವಾರ ರಾತ್ರಿ ಗಾಢ ನಿದ್ರೆಯಲ್ಲಿದ್ದ ಸುರೇಂದ್ರ ವರ್ಮ ದಂಪತಿ ಮನೆಗೆ ದರೋಡೆಕೋರರು ಬಂದಿದ್ದರು. ಬೆಳಗಿನ ಜಾವ 3.30ಕ್ಕೆ ಬಂದ ದರೋಡೆಕೋರರು ಮಾಸ್ಕ್ ಧರಿಸಿದ್ದರು. ಮನೆಯ ಕಿಟಕಿಯನ್ನು ಕಟ್ ಮಾಡಿ ಒಳಗೆ ಬಂದ ಅವರು ಸುರೇಂದ್ರ ವರ್ಮ ಅವರನ್ನು ಹೆದರಿಸಿ, ರೂಮಿನಲ್ಲಿ ಕೂಡಿ ಹಾಕಿದರು. ಅವರಲ್ಲೊಬ್ಬ ಪಿಸ್ತೂಲ್, ಮಚ್ಚು ಹಿಡಿದು ವರ್ಮ ಅವರನ್ನು ಹೆದರಿಸಿದ. ಬಳಿಕ ಉಳಿದವರು ಆ ಮನೆಯಲ್ಲಿದ್ದ 1.5 ಲಕ್ಷ ರೂ. ಹಣ, 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡರು.

ದರೋಡೆಕೋರರು ಮನೆಯಿಂದ ವಾಪಾಸ್ ಹೋಗುವಾಗ ಸುರೇಂದ್ರ ವರ್ಮ ದಂಪತಿಯ ಕಾಲಿಗೆ ನಮಸ್ಕಾರ ಮಾಡಿ, ನಾವು ಅನಿವಾರ್ಯವಾಗಿ ಈ ದರೋಡೆ ಮಾಡಬೇಕಾಯಿತು. ಬಲವಂತವಾಗಿ ನಮ್ಮಿಂದ ಈ ಕೆಲಸ ಮಾಡಿಸಲಾಗುತ್ತಿದೆ. 6 ತಿಂಗಳೊಳಗೆ ನಿಮ್ಮ ಹಣ, ಚಿನ್ನಾಭರಣವನ್ನು ವಾಪಾಸ್ ತಲುಪಿಸುತ್ತೇವೆ ಎಂದು ಹೇಳಿ ಸುರೇಂದ್ರ ವರ್ಮ ಅವರ ಖರ್ಚಿಗೆ 500 ರೂ. ನೀಡಿದರು. ಇದನ್ನು ನೋಡಿದ ಸುರೇಂದ್ರ ವರ್ಮ ದಂಪತಿಗೆ ಅಚ್ಚರಿಯಾಯಿತು.

ದರೋಡೆಕೋರರು ಮನೆಯಿಂದ ಹೋದ ಬಳಿಕ ಆ ದಂಪತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮನೆಗೆ ಬಂದ ಪೊಲೀಸರು ಏನಾದರೂ ಸುಳಿವು ಸಿಗುತ್ತದಾ ಎಂದು ಹುಡುಕಾಡಿದ್ದಾರೆ. ಆದರೆ, ಯಾವ ಸುಳಿವೂ ಸಿಕ್ಕಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *