ದರೋಡೆ ಕೇಸ್; ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಹಾಸನ: ದರೋಡೆ ಪ್ರಕರಣದ (Robbery case) ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಪೊಲೀಸ್ (Hirisave Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಬೂಕನಬೆಟ್ಟ ಪ್ರದೇಶದಲ್ಲಿ ಘಟನೆ ನಡೆದಿದೆ. ಎರಡು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಘುಪತಿ ನೇತೃತ್ವದಲ್ಲಿ ತಂಡವೊಂದನ್ನ ರಚಿಸಲಾಗಿತ್ತು.

ನಾಲ್ವರು ಆರೋಪಿಗಳು ಬೂಕನಬೆಟ್ಟದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು, ಇಂದು (ಭಾನುವಾರ) ಮುಂಜಾನೆ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಲು ತೆರಳಿತ್ತು. ಈ ವೇಳೆ ಆರೋಪಿ ಸತೀಶ್ ಡ್ರ‍್ಯಾಗನ್‌ನಿಂದ ಪೊಲೀಸ್ ಕಾನ್ಸ್‌ಟೇಬಲ್ ಪುಟ್ಟರಾಜು ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಆತ್ಮ ರಕ್ಷಣೆಗೋಸ್ಕರ ಪಿಎಸ್‌ಐ ಭರತ್‌ರೆಡ್ಡಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಾಳು ಕಾನ್ಸ್ಟೇಬಲ್‌ಗೆ ಹಿರಿಸಾವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಸತೀಶ್ ಕಾಲಿಗೆ ಗುಂಡು ತಗುಲಿದ್ದರಿಂದ ಹಿರಿಸಾವೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ನಾಲ್ವರು ಆರೋಪಿಗಳ ಪೈಕಿ ಆರೋಪಿ ಸತೀಶ್‌ಗೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನೂ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.