ಕಳ್ಳತನಕ್ಕೆ ಬಂದು ವೃದ್ಧೆಯ ಹಣ ಪಡೆಯದೆ ತಲೆಗೆ ಮುತ್ತಿಟ್ಟ

ಬ್ರೆಸಿಲಿಯಾ: ಕಳ್ಳತನಕ್ಕೆ ಎಂದು ಔಷಧಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಗ್ರಾಹಕಿ ವೃದ್ಧೆಯ ಬಳಿ ಹಣ ಪಡೆಯದೆ ಆಕೆಯ ತಲೆಗೆ ಮುತ್ತಿಟ್ಟು ಹೋಗಿರುವ ಘಟನೆ ಈಶಾನ್ಯ ಬ್ರೆಜಿಲ್‍ನಲ್ಲಿ ನಡೆದಿದೆ.

ಕಳ್ಳತನ ಮಾಡಲು ಈಶಾನ್ಯ ಬ್ರೆಜಿಲ್‍ನಲ್ಲಿ ಇರುವ ಔಷಧಿ ಅಂಗಡಿಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಶಾಪ್ ಮಾಲೀಕ ಮತ್ತು ಕೆಲಸಗಾರ ಜೊತೆಗೆ ಅಂಗಡಿಗೆ ಬಂದಿದ್ದ ವೃದ್ಧೆಯೂ ಕೂಡ ಇರುತ್ತಾರೆ. ಈ ವೇಳೆ ಅಂಗಡಿಯನ್ನು ದೋಚಿದ ಕಳ್ಳರು ವೃದ್ಧೆಯೊಬ್ಬರು ತಾವೇ ತಮ್ಮ ಬಳಿ ಇದ್ದ ಹಣ ನೀಡಲು ಹೋದರೆ ಪಡೆಯದೇ ತಲೆಗೆ ಮುತ್ತು ಕೊಟ್ಟು ಹೋಗಿದ್ದಾರೆ.

ಕಳ್ಳತನ ನಡೆದಿರುವ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋದಲ್ಲಿ, ಗನ್ ಹಿಡಿದು ಅಂಗಡಿಯೊಳಗೆ ಬಂದ ಇಬ್ಬರು ಕಳ್ಳರು ಅಂಗಡಿ ಮಾಲೀಕ ಮತ್ತು ಕೆಲಸಗಾರನ್ನು ಹೆದರಿಸಿ ಕ್ಯಾಶ್ ಬೋರ್ಡಿನಲ್ಲಿದ್ದ ಹಣವನ್ನು ದೋಚಿಕೊಳ್ಳುತ್ತಿರುತ್ತಾರೆ. ಈ ವೇಳೆ ಸ್ಥಳದಲ್ಲಿದ್ದ ವೃದ್ಧೆಯೊಬ್ಬರು ತಮ್ಮ ಬಳಿ ಇದ್ದ ಹಣವನ್ನು ಕಳ್ಳನಿಗೆ ನೀಡಲು ಹೋಗುತ್ತಾರೆ. ಆಗ ಕಳ್ಳ ಹಣವನ್ನು ಪಡೆಯದೇ ವೃದ್ಧೆಯ ತಲೆಗೆ ಮುತ್ತಿಟ್ಟು ಮುಂದೆ ಹೋಗುತ್ತಾನೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಅಂಗಡಿಯ ಮಾಲೀಕ ಸ್ಯಾಮ್ಯುಯೆಲ್ ಅಲ್ಮೀಡಿಯಾ, ಸಂಜೆ ಸುಮಾರು 5 ಗಂಟೆಗೆ ಇಬ್ಬರು ಕಳ್ಳರು ನಮ್ಮ ಅಂಗಡಿಗೆ ನುಗ್ಗಿದರು. ಆಗ ಅಂಗಡಿಯೊಳಗೆ ನಾನು ನಮ್ಮ ಅಂಗಗಡಿಯ ಕೆಲಸಗಾರ ಮತ್ತು ವೃದ್ಧ ಮಹಿಳೆ ಸೇರಿ ಮೂವರು ಇದ್ದೇವು. ತಕ್ಷಣ ಒಳ ಬಂದ ಇಬ್ಬರು ಯುವಕರು ನಿಮ್ಮ ಅಂಗಡಿಯಲ್ಲಿರುವ ಹಣವನ್ನು ಕೊಡಲು ಹೇಳಿದರು.

ಈ ವೇಳೆ ಒಬ್ಬ ಒಳಗೆ ಬಂದು ಹಣವನ್ನು ತುಂಬಿಕೊಳ್ಳುತ್ತಿದ್ದ ಮತ್ತು ಇನ್ನೊಬ್ಬ ಹೊರಗೆ ನಿಂತಿದ್ದ. ಆಗ ನಮ್ಮ ಅಂಗಡಿಯಲ್ಲಿದ್ದ ವೃದ್ಧ ಮಹಿಳೆ ಕಳ್ಳನಿಗೆ ತಮ್ಮ ಬಳಿ ಇದ್ದ ಹಣವನ್ನು ಕೊಡಲು ಹೋದರು ಆಗ ಆತ ‘ಇಲ್ಲ ಅಮ್ಮ ನಿಮ್ಮ ಹಣ ನಮಗೆ ಬೇಡ ನೀವು ಸುಮ್ಮನೆ ಇರಬಹುದು ನಾವು ನಿಮಗೆ ಏನೂ ಮಾಡುವುದಿಲ್ಲ’ ಎಂದು ಹೇಳಿ ತಲೆಗೆ ಮುತ್ತಿಟ್ಟು ನಮ್ಮ ಅಂಗಡಿಯಲ್ಲಿದ್ದ 71 ಸಾವಿರ ಹಣವನ್ನು ದೋಚಿಕೊಂಡು ಹೋದರು ಎಂದು ಹೇಳಿದ್ದಾರೆ.

ಕಳ್ಳ ವೃದ್ಧೆಯ ತಲೆಗೆ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಆಧಾರವಾಗಿ ಇಟ್ಟಿಕೊಂಡು ಬ್ರೆಜಿಲ್ ಪೊಲೀಸರು ಕಳ್ಳರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಶಂಕಿತನನ್ನು ಬಂಧಿಸಿಲ್ಲ.

Comments

Leave a Reply

Your email address will not be published. Required fields are marked *