`ಕೈʼ ಮುಖಂಡನ ಮನೆ ಗೃಹಪ್ರವೇಶಕ್ಕೆ ಶಾಲಾ ಆವರಣದಲ್ಲೇ ರಸ್ತೆ – ಜೆಸಿಬಿಗೆ ಅಡ್ಡ ನಿಂತ ಮಕ್ಕಳು

ಚಿಕ್ಕಮಗಳೂರು: ಕಾಂಗ್ರೆಸ್ (Congress) ಮುಖಂಡನ ಮನೆಯ ಗೃಹಪ್ರವೇಶಕ್ಕಾಗಿ ಸರ್ಕಾರಿ ಶಾಲಾ (School) ಆಟದ ಮೈದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಪೋಷಕರು ಹಾಗೂ ಮಕ್ಕಳು ಜೆಸಿಬಿಗೆ ಅಡ್ಡ ನಿಂತು (Student Protest) ಕಾಮಗಾರಿಗೆ ತಡೆಯೊಡ್ಡಿ ಪ್ರತಿಭಟಿಸಿದ ಘಟನೆ ಕಡೂರಿನ ಹಡಗಲಿ ಗ್ರಾಮದಲ್ಲಿ ನಡೆದಿದೆ.‌

ಗ್ರಾಮದ ಸರ್ಕಾರಿ ಶಾಲೆಯಲ್ಲಿ 37 ಜನ ಮಕ್ಕಳು ಓದುತ್ತಿದ್ದಾರೆ. ಶಾಲೆ ಪಕ್ಕದಲ್ಲಿರುವ ಗೋಮಾಳದ 18 ಗುಂಟೆ ಜಾಗದಲ್ಲಿ ದಶಕಗಳಿಂದ ಮಕ್ಕಳು ಆಟವಾಡುತ್ತಾ ಬೆಳೆಯುತ್ತಿದ್ದಾರೆ. ಆದರೆ ಇದೇ ಫೆ.6ರಂದು ಕಾಂಗ್ರೆಸ್ ಮುಖಂಡನ ಮನೆಯ ಗೃಹಪ್ರವೇಶಕ್ಕಾಗಿ ಮಕ್ಕಳು ಆಟವಾಡುವ ಮೈದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚೌಳಹಿರಿಯೂರು ಗ್ರಾಮ ಪಂಚಾಯಿತಿಯ ಅಧಿಕಾರಿಯೇ ಮುಂದೆ ನಿಂತು ರಸ್ತೆ ಮಾಡಿಸಲು ಮುಂದಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹೆದ್ದಾರಿ ಕಾಮಗಾರಿ ವೇಳೆ ಸಿಲಿಂಡರ್‌ ಸ್ಫೋಟ – ಟ್ರಕ್‌ ಛಿದ್ರ!

ಗೃಹಪ್ರವೇಶವಾಗುತ್ತಿರುವ ಮನೆಗೆ ಹೋಗಲು ಬೇರೆ ದಾರಿ ಇದೆ. ಆ ದಾರಿ ಬಿಟ್ಟು ಮಕ್ಕಳು ಆಟವಾಡುವ ಮೈದಾನದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಮಕ್ಕಳು ಆಟವಾಡುವುದು ಎಲ್ಲಿ? ನಾವು ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ, ನೀವು ಮೊದಲು ಶಾಲೆಯ ಬಿಲ್ಡಿಂಗ್ ಒಡೆದು ಹಾಕಿ. ನಂತರ ರಸ್ತೆ ನಿರ್ಮಾಣ ಮಾಡಿ. ಆಗ ನಾವು ನಿಮಗೆ ಪ್ರಶ್ನೆ ಮಾಡುವುದಿಲ್ಲ. ಮಕ್ಕಳನ್ನು ಶಾಲೆ ಬಿಡಿಸಿ ಕೂಲಿಗೆ ಕಳುಹಿಸುತ್ತೇವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶದ ಹಿನ್ನೆಲೆ ಅಧಿಕಾರಿಗಳು ಕೆಲಸ ನಿಲ್ಲಿಸಿ ಹೋಗಿದ್ದಾರೆ.

ಶಾಲಾ ಆಡಳಿತ ಮಂಡಳಿಯ ಸದಸ್ಯರು ಹತ್ತಾರು ವರ್ಷಗಳಿಂದ 18 ಗುಂಟೆ ಗೋಮಾಳದ ಜಾಗವನ್ನು ಶಾಲೆಯ ಆಟದ ಮೈದಾನಕ್ಕೆ ದಾಖಲೆ ಮಾಡಿಕೊಡಿ ಎಂದು ಮನವಿ ಮಾಡುತ್ತಾ ಬಂದಿದ್ದರು. ಆದರೆ ಅಧಿಕಾರಿಗಳು ಈ ಮನವಿಗೆ ಸ್ಪಂದಿಸಿರಲಿಲ್ಲ. ಈಗ ಶಾಲೆ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಗೋಮಾಳ ಜಾಗ ಆಗಿರುವುದರಿಂದ ಜಾಗವನ್ನು ಒತ್ತುವರಿ ಮಾಡಲು ಈ ರೀತಿ ಹುನ್ನಾರ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ʻಕೈʼ ಮುಖಂಡ ಪ್ರಮೋದ್ ಎಂಬುವರ ಮನೆ ಗೃಹಪ್ರವೇಶ ಆಗುತ್ತಿದ್ದು, ಅವರ ಮನೆಗೆ ಹೋಗಲು ಅನುಕೂಲವಾಗಲಿ ಎಂದು ಆಟದ ಮೈದಾನದ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಪ್ರಮೋದ್ ಅವರು ಕಡೂರು ಶಾಸಕ ಆನಂದ್ ಅವರ ಆಪ್ತ ಎಂದು ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಡ್ರೈವರ್‌, ಕಂಡಕ್ಟರ್‌ ಫೈಟ್‌ – ಬೇರೆ ಬಸ್ಸು ಹತ್ತಿದ ಪ್ರಯಾಣಿಕರು