ಮಹಾಮಳೆಗೆ ಧರೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕ ಕಟ್

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಳೆದೆರಡು ತಿಂಗಳಿನಿಂದ ಸುರಿಯುತ್ತಿದ್ದ ವರುಣ ದೇವ, ಒಂಬತ್ತು ದಿನಗಳಿಂದ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಪರಿಣಾಮ ಮಹಾಮಳೆಗೆ ಭೂ ಕುಸಿತ ಉಂಟಾಗಿದೆ.

ಕೊಪ್ಪ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ಧರೆ ಕುಸಿತ ಉಂಟಾಗಿದ್ದು, ಇದರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮೇಲ್ಪಾಲ್, ಹೊದಸಾಳು ಮತ್ತು ಕೆರೆಹಕ್ಲು ಗ್ರಾಮಕ್ಕೆ ದಾರಿಯೇ ಇಲ್ಲದಂತಾಗಿದೆ. ರಸ್ತೆ ಸಂಪೂರ್ಣ ಕುಸಿದಿರುವುದರಿಂದ ಬದಲಿ ಮಾರ್ಗವಿಲ್ಲದ ಕಾರಣ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಕೂಡಲೇ ರಸ್ತೆ ದುರಸ್ಥಿಗೊಳಿಸುವಂತೆ ಜಿಲ್ಲಾಡಳಿತ ಮತ್ತು ಶಾಸಕರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಪುನರ್ವಸು ಹಾಗೂ ಕುಂಭದ್ರೋಣ ಮಳೆ ಕಂಡು ಕಂಗಾಲಾಗಿದ್ದ ಮಲೆನಾಡಿಗರು ಇದೀಗ, ಆಶ್ಲೇಷನ ಆರ್ಭಟಕ್ಕೆ ಕಂಗೆಟ್ಟಿದ್ದಾರೆ. ಜಿಲ್ಲೆಯ ಕೊಪ್ಪ, ಮೂಡಿಗೆರೆಯಲ್ಲಿ ಜೋರು ಮಳೆ ಇದ್ದರೆ, ಕಳಸ, ಕುದುರೆಮುಖ, ಕೆರೆಕಟ್ಟೆ ಹಾಗೂ ಶೃಂಗೇರಿ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಹೇಳತೀರದ್ದಾಗಿದೆ.

ಬುಧವಾರ ಭದ್ರಾ ಅಣೆಕಟ್ಟಿನಿಂದ 1 ಲಕ್ಷಕ್ಕೂ ಅತಿ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ತರೀಕೇರಿ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಸೇತುವೆಯ ಮುಳುಗಡೆಯಾಗಿದೆ. ಭಾರೀ ಮಳೆಯಿಂದ ಜೀವನದಿಗಳಾದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಸಾಕಷ್ಟು ಅನಾಹುತಗಳನ್ನ ಸೃಷ್ಟಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *