ರಾತ್ರೋರಾತ್ರಿ ರಸ್ತೆಗೆ ಮುಳ್ಳು ತಂತಿ ಬೇಲಿ – ಜಮೀನಿಗೆ ಹೋಗಲು ದಾರಿಯಿಲ್ಲದೆ ರೈತರಿಗೆ ಕಿರಿಕಿರಿ

– ಹಸು, ಕರು ಎತ್ತುಗಳು ಹೊಲದಲ್ಲೇ ಬಂಧಿ

ಚಿಕ್ಕಬಳ್ಳಾಪುರ: ತಮ್ಮ ತಾತನ ಕಾಲದಿಂದಲೂ ಅವರು ಅದೇ ರಸ್ತೆಯಲ್ಲೇ ಓಡಾಡುತ್ತಿದ್ದರು. ಪ್ರತಿ ದಿನ ಅದೇ ರಸ್ತೆಯ ಮೂಲಕ ಹಸು, ಕರು, ಎತ್ತು ಕರೆದುಕೊಂಡು ಜಮೀನಿಗೆ ಹೋಗಿ ಕೃಷಿಕಾಯಕ ಮಾಡಿಕೊಂಡು ಮರಳಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಆದ್ರೆ ರಾತ್ರೋರಾತ್ರಿ ಆ ರಸ್ತೆಗೆ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊರ್ವ ಮುಳ್ಳು ತಂತಿ ಬೇಲಿ ಹಾಕಿ ಮುಚ್ಚಿದ್ದಾರೆ. ಇದರಿಂದ ಜಮೀನುಗಳಿಗೆ ಹೋಗೋಕೆ ರಸ್ತೆ ಇಲ್ಲದ ರೈತರು ಅಸಹಾಯಕರಾಗಿ ಅಕ್ಷರಶಃ ದಿಗ್ಭಂಧನಕ್ಕೀಡಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಜಿಲಾಜರ್ಲ ಗ್ರಾಮದ ಬಳಿ ರಸ್ತೆಗೆ ಮುಳ್ಳು ಬೇಲಿ ಹಾಕಲಾಗಿದೆ. ಗ್ರಾಮದಿಂದ ಜಮೀನುಗಳಿಗೆ ಹೋಗೋಕೆ ಅಂತ ಇದ್ದ ಏಕೈಕ ಮಾರ್ಗವನ್ನ ಬೆಂಗಳೂರಿನ ಬೆಳ್ಳಂದೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊರ್ವ ರಾತ್ರೋರಾತ್ರಿ ಮುಳ್ಳು ತಂತಿ ಬೇಲಿ ಹಾಕಿ ಮುಚ್ಚಿದ್ದಾರೆ. ಇದರಿಂದ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗೋಕೆ ಪರದಾಡುವಂತಾಗಿದೆ. ಹಲವು ವರ್ಷಗಳಿಂದ ಇದೇ ರಸ್ತೆಯಲ್ಲಿ ಜಮೀನಿಗೆ ಹೋಗಿ ಕೃಷಿಕಾಯಕ ಮಾಡುತ್ತಿದ್ದ ರೈತರು ಇದೀಗ ದಾರಿ ಕಾಣದೆ ಕಂಗಾಲಾಗಿ ಹೋಗಿದ್ದಾರೆ.

ಅಸಲಿಗೆ ಈ ಗ್ರಾಮದ ರೈತರಿಗೆ ತಮ್ಮ ಜಮೀನುಗಳಿಗೆ ಹೋಗೋಕೆ ಇರೋದು ಇದೊಂದೆ ಮಾರ್ಗ. ಇದೇ ಮಾರ್ಗದಲ್ಲಿ ತಮ್ಮ ಹಸು, ಕರು, ಎತ್ತುಗಳು ಸೇರಿದಂತೆ ಕೃಷಿ ಪರಿಕರಗಳನ್ನ ಕೊಂಡೊಯ್ದು ಕೃಷಿ ಮಾಡುತ್ತಿದ್ದರು. ಕೆಲವರು ಮನೆಗಳನ್ನ ಸಹ ನಿರ್ಮಾಣ ಮಾಡಿಕೊಂಡು ಬದುಕು ಕಟ್ಟಟಿಕೊಂಡಿದ್ದಾರೆ. ಆದ್ರೆ ಈಗ ದಾರಿಯಿಲ್ಲದ ಕಾರಣ ಹಸು, ಕರು, ಎತ್ತುಗಳು ಜಮೀನನಲ್ಲೇ ದಿಗ್ಭಂಧನಕ್ಕೀಡಾಗಿವೆ. ಮತ್ತೊಂದೆಡೆ ಬೆಳೆದ ಬೆಳೆಗಳನ್ನೆಲ್ಲಾ ಕಟಾವು ಮಾಡಿ ಮಾರುಕಟ್ಟೆಗೆ ಹೊತ್ತು ತರಲಾಗದೆ ರೈತರು ಬೆಳದ ಬೆಳೆಗಳೆಲ್ಲಾ ಕಣ್ಣೆದುರೇ ಕಮರಿ ಹೋಗುತ್ತಿವೆ.

ಸದ್ಯ ಬಾಗೇಪಲ್ಲಿ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ರಸ್ತೆ ಹಾಗೂ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. ಆದರೆ ಈ ಬಗ್ಗೆ ತಕರಾರು ತೆಗೆದಿರುವ ಮಾಲೀಕ ಶ್ರೀನಿವಾಸ್ ನ್ಯಾಯಾಲಯದ ಮೆಟ್ಟೇಲೇರಿದ್ದು ತಡೆಯಾಜ್ಞೆ ತಂದಿದ್ದಾರಂತೆ. ಹೀಗಾಗಿ ಏನೂ ಮಾಡಲಾಗದ ರೈತರು ಅತಂತ್ರ ಸ್ಥಿತಿಗೆ ತಲುಪಿ ಅಸಹಾಯಕತೆಯಿಂದ ದಿನ ದೂಡುವಂತಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *