ಜ್ಞಾನವಾಪಿ ಮಸೀದಿಯಲ್ಲಿ 31 ವರ್ಷದ ಬಳಿಕ ವಿಗ್ರಹಗಳಿಗೆ ಪೂಜೆ

ನವದೆಹಲಿ: ಜ್ಞಾನವಾಪಿ ಮಸೀದಿಯ (Gyanvapi Masjid) ನೆಲಮಾಳಿಗೆಯಲ್ಲಿರುವ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಕೋರ್ಟ್‌ ಅನುಮತಿ ನೀಡಿದ 8 ಗಂಟೆಯೊಳಗೆ ಪೂಜೆ (Puja) ಆರಂಭವಾಗಿದೆ.

ಜ್ಞಾನವಾಪಿ ಆವರಣದಲ್ಲಿ ಮಧ್ಯರಾತ್ರಿಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಯಿತು. ನೆಲಮಾಳಿಗೆಯಲ್ಲಿರುವ ವಿಗ್ರಹಕ್ಕೆ ಬುಧವಾರ ರಾತ್ರಿ 11 ಗಂಟೆಗೆ ಪೂಜೆ ನಡೆದಿದೆ. ಪೂಜೆಯ ಬಳಿಕ ಮಂಗಳಾರತಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಈ ಮೂಲಕ ಜ್ಞಾನವಾಪಿಯಲ್ಲಿ 31 ವರ್ಷಗಳ ಬಳಿಕ ಪೂಜೆ ನಡೆಯಿತು. ಪೂಜೆ ವೇಳೆ ಮಸೀದಿಯ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ಜ್ಞಾನವಾಪಿ ಪೂಜೆ ಟೈಮ್ ಲೈನ್:
ಮಧ್ಯಾಹ್ನ 3.00 ಗಂಟೆ: ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆಗೆ ವಾರಣಾಸಿ ಕೋರ್ಟ್ ಅನುಮತಿ.
ಸಂಜೆ 5.00 ಗಂಟೆ :ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್.ರಾಜಲಿಂಗಂ ನೇತೃತ್ವದಲ್ಲಿ ಅಧಿಕಾರಿಗಳ ಸಭೆ.

ರಾತ್ರಿ 7.00 ಗಂಟೆ: ಎರಡು ಗಂಟೆ ಕಾಲ ನಡೆದ ಸಭೆಯಲ್ಲಿ ಜ್ಞಾನವಾಪಿ ಪರಿಸರದಲ್ಲಿ ಭದ್ರತೆ ಹೆಚ್ಚಳಕ್ಕೆ ಸೂಚನೆ.
ರಾತ್ರಿ 8.15: ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ.
ರಾತ್ರಿ 9.00 ಗಂಟೆ: ದೇಗುಲದ 5 ಅರ್ಚಕರಿಗೆ ಬುಲಾವ್.

ರಾತ್ರಿ‌ 10.30: ಬ್ಯಾರಿಕೇಡ್ ತೆರವು, ಕಾಶಿ ವಿಶ್ವನಾಥ ಟ್ರಸ್ಟ್ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ. ದೇಗುಲಕ್ಕೆ ಆಗಮಿಸಿದ ಪೂಜಾ ಸಾಮಗ್ರಿ, ಅರ್ಚಕರು.
ರಾತ್ರಿ 11.00 ಗಂಟೆ: ನೆಲಮಾಳಿಗೆಯಲ್ಲಿ ಸ್ವಚ್ಛತಾ ಕಾರ್ಯದ ಬಳಿಕ ಪೂಜೆ ನಡೆಯಿತು. ಮೊದಲು ಗಣೇಶ, ಲಕ್ಷ್ಮಿ ದೇವಿಗೆ ಆರತಿ ಬೆಳಗಲಾಯಿತು. ಗೋಡೆಯಲ್ಲಿದ್ದ ಶಿವಲಿಂಗ, ಧಾರ್ಮಿಕ ಚಿಹ್ನೆಗಳಿಗೂ ಪೂಜೆ ಸಲ್ಲಿಸಲಾಯಿತು.

ವಾರಣಾಸಿಯ (Varanasi) ಜ್ಞಾನವಾಪಿ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ಪಡೆದಿರುವ ವ್ಯಾಸ್ ಕುಟುಂಬದ ಸದಸ್ಯ ಜಿತೇಂದ್ರ ನಾಥ್ ವ್ಯಾಸ್ ಪ್ರತಿಕ್ರಿಯಿಸಿ, ನಮಗೆ ಅಲ್ಲಿ ಪೂಜೆಯನ್ನು ಮತ್ತೆ ಆರಂಭಿಸಲು ಅನುಮತಿ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಬುಧವಾರ ರಾತ್ರಿ ಪೂಜೆಯ ಸಮಯದಲ್ಲಿ ದೇಗುಲದ ಟ್ರಸ್ಟ್‌ನ ಐವರು ಅರ್ಚಕರು, ವ್ಯಾಸ್ ಕುಟುಂಬದ ಸದಸ್ಯರು, ವಾರಣಾಸಿ ಡಿಎಂ ಮತ್ತು ಆಯುಕ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

ಈ ಸಂಬಂಧ ಭಕ್ತರೊಬ್ಬರು ಪ್ರತಿಕ್ರಿಯಿಸಿ, ನಾವೆಲ್ಲರೂ ಪ್ರತಿದಿನ ಮುಂಜಾನೆ 3:30ರ ಸುಮಾರಿಗೆ ದರ್ಶನಕ್ಕಾಗಿ ಇಲ್ಲಿಗೆ ಬರುತ್ತೇವೆ. ಇದೀಗ ನ್ಯಾಯಾಲಯದ ಆದೇಶದಿಂದ ನಾವು ಅತ್ಯಂತ ಸಂತೋಷ ಮತ್ತು ಭಾವನಾತ್ಮಕವಾಗಿದ್ದೇವೆ ಎಂದು ತಿಳಿಸಿದ್ದಾರೆ. ಇತ್ತ ವಕೀಲ ಸೋಹನ್ ಲಾಲ್ ಆರ್ಯ ಅವರು, ಇಂದು ನಾವು ತುಂಬಾ ಹೆಮ್ಮೆಪಡುತ್ತೇವೆ. ನಿನ್ನೆ ನ್ಯಾಯಾಲಯದ ತೀರ್ಪು ಅಭೂತಪೂರ್ವವಾಗಿದೆ. ವ್ಯವಸ್ಥೆಗಳನ್ನು ಮಾಡಲಾಗಿದೆ ಆದರೆ ಅದನ್ನು (ವ್ಯಾಸ್ ಕಾ ತೆಖಾನಾ) ಭಕ್ತರಿಗೆ ಇನ್ನೂ ತೆರೆಯಲಾಗಿಲ್ಲ ಎಂದು ಹೇಳಿದ್ದಾರೆ.

ಕೋರ್ಟ್‌ ಅನುಮತಿ: ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಮಸೀದಿ (Varanasi Gyanvapi Mosque) ನಿರ್ಮಾಣ ಆಗಿರುವುದು ಮಂದಿರದ ಮೇಲೆ ಎಂಬ ಸತ್ಯ ಬಯಲಾದ ಬೆನ್ನಲ್ಲೇ ಹಿಂದೂಗಳಿಗೆ ಈಗ ಪೂಜಾಧಿಕಾರ ದಕ್ಕಿದೆ. ಈ ಪ್ರಾರ್ಥನಾ ಮಂದಿರದಲ್ಲಿ ಸೀಲ್ ಮಾಡಿರುವ ಬೇಸ್‌ಮೆಂಟ್‌ನಲ್ಲಿ ಇರುವ ಹಿಂದೂ ವಿಗ್ರಹಗಳಿಗೆ ಪೂಜೆ ಮಾಡಲು ವಾರಣಾಸಿ ಕೋರ್ಟ್ (Varanasi Court) ಅನುಮತಿ ನೀಡಿತ್ತು.

ಮುಂದಿನ ಒಂದು ವಾರದಲ್ಲಿ ಪೂಜೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಕಾಶಿ ವಿಶ್ವನಾಥ ಮಂದಿರಕ್ಕೆ ಸೇರಿದ ಅರ್ಚಕರನ್ನು ಗುರುವಾರ ನೇಮಿಸಬೇಕು. ಹಿಂದೂ ಅರ್ಚಕರು ಪೂಜೆ ಮಾಡಲು ಬ್ಯಾರಿಕೇಡ್ ತೆರವು ಮಾಡಬೇಕು ಎಂದು ಸ್ಥಳೀಯ ಆಡಳಿತಕ್ಕೆ ವಾರಣಾಸಿ ಕೋರ್ಟ್ ನಿರ್ದೇಶನ ನೀಡಿತ್ತು.