ಧೋನಿ ದಾಖಲೆ ಮುರಿದ ಯುವ ವಿಕೆಟ್ ಕೀಪರ್ ರಿಷಬ್ ಪಂತ್

ನವದೆಹಲಿ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಕ್ರಿಕೆಟ್ ಪಂದ್ಯದಲ್ಲಿ 65 ರನ್ ಸಿಡಿಸುವ ಮೂಲಕ ಧೋನಿ ದಾಖಲೆಯನ್ನು ಮುರಿದಿದ್ದಾರೆ.

ವಿಂಡೀಸ್ ವಿರುದ್ಧ ಮಂಗಳವಾರ ನಡೆದ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಈ ಸಾಧನೆ ಮಾಡಿದ್ದು, ಟೀಂ ಇಂಡಿಯಾ ಪರ ಟಿ20 ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನ ಬರೆದರು. ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅತಿ ಹೆಚ್ಚು ಅಂದರೆ 56 ರನ್ ಗಳಿಸಿದ್ದರು. 2017 ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ 56 ರನ್ ಸಿಡಿಸಿದ್ದರು.

ಧೋನಿ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಮಾದರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಪಂತ್ 3ನೇ ಟಿ20 ಪಂದ್ಯದಲ್ಲಿ ನಾಯಕ ಕೊಹ್ಲಿರೊಂದಿಗೆ ಕೂಡಿ 106 ರನ್ ಜೊತೆಯಾಟ ನೀಡಿದ್ದರು. ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಪಡೆದು 3 ಪಂದ್ಯಗಳ ಟಿ20 ಸರಣಿಯಲ್ಲಿ ಗೆದ್ದು ಬೀಗಿದೆ.

ವಿಂಡೀಸ್ ವಿರುದ್ಧ ಮೊದಲ 2 ಟಿ20 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಪಂತ್ ಮೊದಲ ಪಂದ್ಯದಲ್ಲಿ ಶೂನ್ಯ ಸಾಧನೆ ಮಾಡಿದ್ದರೆ, 2ನೇ ಪಂದ್ಯದಲ್ಲಿ 4 ರನ್ ಗಳಿಸಿದ್ದರು. ಪರಿಣಾಮ ಅಂತಿಮ ಟಿ20 ಪಂದ್ಯಕ್ಕೆ ಅವರನ್ನು ಕೈಬಿಡಲಾಗುತ್ತದೆ ಎನ್ನಲಾಗಿತ್ತು. ಆದರೆ ನಾಯಕ ಕೊಹ್ಲಿ ನೀಡಿದ 3ನೇ ಅವಕಾಶವನ್ನು ಬಳಿಸಿಕೊಂಡ ಪಂತ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂತ್ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ 42 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 65 ರನ್ ಗಳಿಸಿದ್ದರು. ಇತ್ತ 45 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 59 ರನ್ ಗಳಿಸಿದ ಕೊಹ್ಲಿ, ಭಾರತದ ಪರ ಟಿ20 ಕ್ರಿಕೆಟ್ ಅತಿ ಹೆಚ್ಚು ಅರ್ಧ ಶತಕ ಗಳಿಸಿದ್ದ ರೋಹಿತ್ ಶರ್ಮಾರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೀಂ ಇಂಡಿಯಾ ನಾಳೆ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದ್ದು, ಒಟ್ಟು 3 ಏಕದಿನ ಪಂದ್ಯಗಳನ್ನು ಟೂರ್ನಿಯಲ್ಲಿ ಆಡಲಿದೆ. ಆ ಬಳಿಕ ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಜರ್ನಿಯನ್ನು ವೆಸ್ಟ್ ಇಂಡೀಸ್ ತಂಡದ ವಿರುದ್ಧವೇ ಆರಂಭಿಸಲಿದೆ.

Comments

Leave a Reply

Your email address will not be published. Required fields are marked *