ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

ನ್ನಡದ ಪ್ರೇಕ್ಷಕರು ವೈವಿಧ್ಯತೆ ಬಯಸುವ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಇಲ್ಲಿ ಹೊಸ ಆಲೋಚನೆ, ಪ್ರಯೋಗಗಳ ಚಿತ್ರಗಳು ಸೋಲುವುದಿಲ್ಲ. ಅದೆಂಥಾ ಸವಾಲುಗಳೆದುರಾದ ಘಳಿಗೆಯಲ್ಲಿಯೂ ಪ್ರೇಕ್ಷಕರು ಅಂಥಾ ಸಿನಿಮಾಗಳನ್ನು ಕೈ ಬಿಡುವುದಿಲ್ಲ. ಬಹುಶಃ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಮೂಡಿ ಬಂದು ತೆರೆಗಾಣಲು ಸಜ್ಜುಗೊಂಡಿರೋ ಕಥಾ ಸಂಗಮ ಚಿತ್ರ ರೂಪುಗೊಂಡಿದ್ದರ ಹಿಂದೆಯೂ ಪ್ರೇಕ್ಷಕರ ಔದಾರ್ಯವಿದೆ. ಇಂಥಾ ಸೂಕ್ಷ್ಮಗಳನ್ನು ಖಚಿತವಾಗಿಯೇ ಅರ್ಥ ಮಾಡಿಕೊಂಡಿರುವ ರಿಷಬ್ ಶೆಟ್ಟಿ ವರ್ಷಗಳ ಹಿಂದೆಯೇ ಕಥಾ ಸಂಗಮವೆಂಬ ಕನಸಿಗೆ ಕಾವು ಕೊಟ್ಟಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾ ಟ್ರೇಲರ್‍ಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲವೇ ಮಹಾ ಗೆಲುವೊಂದರ ಮುನ್ಸೂಚನೆಯಂತೆ ಕಾಣಿಸುತ್ತಿದೆ. ಇದರ ಬೆನ್ನಲ್ಲಿಯೇ ಹೊರ ಬಿದ್ದಿರುವ ಪೂರಕ ಮಾಹಿತಿಗಳು ಕಥಾ ಸಂಗಮದತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗುವಂತಿವೆ.

ಈ ಟ್ರೇಲರ್‌ನಲ್ಲಿ ಏಳೂ ಕಥೆಗಳ ಝಲಕ್ಕುಗಳನ್ನು ಜಾಹೀರು ಮಾಡುತ್ತಲೇ ಪಾತ್ರಗಳ ಪರಿಚಯವನ್ನೂ ಮಾಡಿಸಲಾಗಿದೆ. ಅದರಲ್ಲಿ ಎಂಥವರೂ ಆಹ್ಲಾದಗೊಳ್ಳುವಂಥಾ ತಾಜಾ ತಾಜ ಸನ್ನಿವೇಶಗಳು, ನಿಗೂಢ ಕಥೆಗಳ ಮುನ್ಸೂಚನೆಗಳೆಲ್ಲ ಗೋಚರಿಸುತ್ತಾ ಲಕ್ಷ ಲಕ್ಷ ವೀಕ್ಷಣೆಯೊಂದಿಗೆ ಟ್ರೆಂಡಿಂಗ್‍ನಲ್ಲಿದೆ. ಶ್ರೀದೇವಿ ಎಂಟರ್‍ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಅಪರೂಪದ ಕಥೆಗಳ ಮಹಾ ಸಂಗಮವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಪ್ರತೀ ಪ್ರೇಕ್ಷಕರಿಗೂ ಮನವರಿಕೆ ಮಾಡಿ ಕೊಡುವಲ್ಲಿ ಈ ಟ್ರೇಲರ್ ಗೆದ್ದಿದ್ದಾರೆ. ಈ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ.

ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರೂಪಿಸೋದೇ ಕಷ್ಟದ ಸಂಗತಿ. ಅಂಥಾದ್ದರಲ್ಲಿ ಏಳು ಕಥೆಗಳ ಸೂತ್ರ ಹಿಡಿದು ಎಲ್ಲಿಯೂ ಗೊಂದಲ ಉಂಟಾಗದಂತೆ ರೂಪಿಸೋದೊಂದು ಸಾಹಸ. ನಿರ್ದೇಶಕ ರಿಷಬ್ ಶೆಟ್ಟಿ ಏಳು ಮಂದಿ ಪ್ರತಿಭಾನ್ವಿತ ಯುವ ನಿರ್ದೇಶಕರ ಬೆಂಬಲದೊಂದಿಗೆ ಅದನ್ನು ಸಾಧ್ಯವಾಗಿಸಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ದಾಖಲೆ ಸೃಷ್ಟಿಸುವಂತಿದೆ ಎಂಬ ನಂಬಿಕೆಯಂತೂ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದೆ. ರಿಷಬ್ ಶೆಟ್ಟಿ ಯಾವ ಚಿತ್ರ ಮಾಡಿದರೂ ಅಲ್ಲೊಂದು ಹೊಸತನ ಇರುತ್ತದೆ. ಆದರೆ ಈ ಬಾರಿ ಹೊಸತನವೇ ಕಥಾ ಸಂಗಮವಾಗಿ ಮೈದಾಳಿದೆ. ಚೆಂದದ ಏಳು ಕಥೆ, ಚಿತ್ರವಿಚಿತ್ರವಾದ ಪಾತ್ರಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಚಿತ್ರ ವಾರದೊಪ್ಪತ್ತಿನಲ್ಲಿಯೇ ತೆರೆಗಾಣಲಿದೆ.

Comments

Leave a Reply

Your email address will not be published. Required fields are marked *