ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ಹಾಗೂ ಕೃಷಿ ಸಚಿವರಾಗಿರುವ ಗೌರಿಬಿದನೂರು ಶಾಸಕ ಬೆಂಬಲಿಗರ ನಡುವಿನ ಭಿನ್ನಮತ ಸ್ಫೋಟಗೊಂಡಿದೆ.
ಹಾಲಿ ಅಧ್ಯಕ್ಷರಾಗಿರುವ ಶಿವಶಂಕರರೆಡ್ಡಿ ಬೆಂಬಲಿತ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಅವರನ್ನು ಅಧ್ಯಕ್ಷಗಾದಿಯಿಂದ ಕೆಳಗಿಳಿಸಿಲು ಶಾಸಕ ಸುಧಾಕರ್ ಬೆಂಬಲಿತ ಸದಸ್ಯರು ರಣತಂತ್ರ ರೂಪಿಸಿದ್ದಾರೆ. ಈ ಬಗ್ಗೆ ಸ್ವತಃ ಸ್ಪಷ್ಟಪಡಿಸಿರುವ ಸುಧಾಕರ್ ಬೆಂಬಲಿತ ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ್ ಬಹಿರಂಗವಾಗಿ ಈ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್, ಮೊದಲೇ ತೀರ್ಮಾನ ಮಾಡಿರುವಂತೆ 8 ತಿಂಗಳ ನಂತರ ಅಧ್ಯಕ್ಷ ಸ್ಥಾನವನ್ನ ಹಾಲಿ ಅಧ್ಯಕ್ಷರಾದ ಮಂಜುನಾಥ್ ಬಿಟ್ಟುಕೊಡಬೇಕಿತ್ತು. ಆದರೆ ನವೆಂಬರ್ 6ಕ್ಕೆ ಅವರ 8 ತಿಂಗಳ ಅವಧಿ ಮುಗಿದರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿಲ್ಲ. ಹೀಗಾಗಿ ನಾವು ಸ್ವತಃ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಗಮನಕ್ಕೆ ತಂದಿದ್ದೇವೆ. ಆದರೆ ಅವರು ಕೂಡ ನಮಗೆ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಸುಧಾಕರ್ ಬೆಂಬಲಿಗರಾದ 14 ಮಂದಿ ಸದಸ್ಯರು ಇಂದಿನ ಸಾಮಾನ್ಯಸಭೆಗೆ ಗೈರು ಹಾಜರಾಗಿದ್ದಾಗಿ ಹೇಳಿದರು.
ಕಳೆದ ಬಾರಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯ ಗಮನಕ್ಕೆ ಬಂದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಭಿನ್ನಮತ ಶಮನವಾಗಿ ಶಿವಶಂಕರರೆಡ್ಡಿ ಬೆಂಬಲಿಗ ಎಚ್ ವಿ ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆಯಾಗಿದರು. ಆದರೆ ಇಂದು ಹಾಲಿ ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದಿರುವ ಶಾಸಕ ಸುಧಾಕರ್ ಬೆಂಬಲಿತ ಜಿಲ್ಲಾ ಪಂಚಾಯತಿ ಸದಸ್ಯರು ಇಂದು ನಿಗದಿಯಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಗೆ ಗೈರು ಹಾಜರಾಗಿ ಭಿನ್ನಮತ ಬಹಿರಂಗ ಮಾಡಿದ್ದಾರೆ. ಅಲ್ಲದೇ ಶಾಸಕ ಸುಧಾಕರ್ ಬೆಂಬಲಿತ ಸದಸ್ಯರು ಅಜ್ಞಾತ ಸ್ಥಳದಲ್ಲಿ ಸಭೆ ನಡೆಸುವ ಮೂಲಕ ಹಾಲಿ ಅಧ್ಯಕ್ಷ ಮಂಜುನಾಥ್ ಅವರನ್ನ ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಲು ರಣತಂತ್ರ ರೂಪಿಸಿದ್ದರು. ಸಭೆಗೆ ಆಡಳಿತ ಕಾಂಗ್ರೆಸ್ ಸುಧಾಕರ್ ಬೆಂಬಲಿಗರು ಬಾರದೇ ಕೋರಂ ಕೊರತೆ ಉಂಟಾಗಿ ಸಭೆ ಮುಂದೂಡಿದ ಹಾಲಿ ಅಧ್ಯಕ್ಷ ಮಂಜುನಾಥ್, ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಮಾಡಬೇಕಾದ ಜನಪ್ರತಿನಿಧಿಗಳು ಸಭೆಗೆ ಬಾರದೇ ರಾಜಕಾರಣ ಮಾಡುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply