ನನ್ನ, ಯಡಿಯೂರಪ್ಪ ನಡುವೆ ಯಾವುದೇ ವೈಮನಸ್ಸಿಲ್ಲ – ಸಿಎಂ ಸಮ್ಮುಖದಲ್ಲೇ ಈಶ್ವರಪ್ಪ ಸ್ಪಷ್ಟನೆ

ಶಿವಮೊಗ್ಗ: ನನ್ನ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಡುವೆ ಯಾವುದೇ ವೈಮನಸ್ಸಿಲ್ಲ. ಆದರೆ ಕೆಲವರು ನಮ್ಮಿಬ್ಬರ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬಿಎಸ್‍ವೈ ಎದುರಿನಲ್ಲಿಯೇ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಇಂದು ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಹಾಗೂ ಯಡಿಯೂರಪ್ಪ ಅವರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ಈ ರೀತಿ ಹೇಳಿಕೆ ನೀಡುವ ಮೂಲಕ ಭಿನ್ನಮತವಿದೆ ಎಂದು ಬಿಂಬಿಸುತ್ತಿದ್ದಾರೆ ಎಂದರು.

ಸಿಎಂ ಬಿಎಸ್‍ವೈ ತಂತಿ ಮೇಲಿನ ನಡಿಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಎಸ್‍ವೈ ಅವರಿಗೆ ಆದ ನೋವನ್ನು ಹೇಳಿಕೊಂಡಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ನಿಮಗೆ ಆಗಲಿಲ್ಲ ಅಂದರೆ ರಾಜೀನಾಮೆ ನೀಡಿ ಹೋಗಿ ಎಂದಿದ್ದಾರೆ. ರಾಜೀನಾಮೆ ಕೇಳಲು ನೀವು ಯಾರು? ರಾಜೀನಾಮೆ ಕೊಡಿ ಅಂತೀರಲ್ಲಾ ನೀವು ಏನು ಕಡಿದು ಕಟ್ಟೆ ಹಾಕಿದ್ದೀರಿ. ಆಗಲೇ ನೀವು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿ ಆಗಿದ್ದ ವೇಳೆ ಬರ ಪರಿಹಾರದ ಹೆಸರಿನಲ್ಲಿ ಎಷ್ಟು ಕೋಟಿ ಹಣ ಲೂಟಿ ಮಾಡಿದ್ದೀರಾ ಇದನ್ನು ತನಿಖೆ ಮಾಡಿಸಬೇಕಾಗುತ್ತದೆ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪನವರನ್ನು ನೋಡಿ ಕಲಿಯಬೇಕಿದೆ. ರಾಜ್ಯದಲ್ಲಿ ಯಡಿಯೂರಪ್ಪನವರಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀರಾ, ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇನ್ನೂ ಅಭಿವೃದ್ಧಿ ಕೆಲಸ ಮಾಡುತ್ತಾರೆ. ಸಿಎಂ ಬಿಎಸ್‍ವೈ ನೆರೆ ಪರಿಹಾರಕ್ಕೆ ಕೇಂದ್ರ ಸರಕಾರದಿಂದ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಿದ್ದರಾಮಯ್ಯನವರೇ ನೀವು ಸಿಎಂ ಆಗಿದ್ದಾಗ ಬರ ಪರಿಹಾರದ ಹೆಸರಿನಲ್ಲಿ ಎಷ್ಟು ಕೋಟಿ ಹಣ ಲೂಟಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಹೆಚ್ಚುವರಿಯಾಗಿ ಕ್ರೀಡಾ ಇಲಾಖೆಯನ್ನು ವಹಿಸಿದ ನಂತರ ಮಾಧ್ಯಮದವರು ಮನೆಗೆ ಬಂದು ಕ್ರೀಡಾ ಇಲಾಖೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಇದಕ್ಕೆ ನಾನು ಗ್ರಾಮೀಣಾಭಿವೃದ್ಧಿ ಖಾತೆಯೇ ದೊಡ್ಡ ಖಾತೆ. ಹೀಗಾಗಿ ಸಿಎಂ ಜೊತೆ ಮಾತನಾಡಿ ಹೆಚ್ಚುವರಿ ಖಾತೆ ಕುರಿತು ತೀರ್ಮಾನಿಸುತ್ತೇನೆ ಎಂದಿದ್ದೆ. ಈ ಕಾರಣಕ್ಕೆ ಗೊಂದಲ ಸೃಷ್ಟಿಸಿದರು. ಯಡಿಯೂರಪ್ಪನವರೇ ಕೆಲವರು ಗೊಂದಲ ಸೃಷ್ಟಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದನ್ನು ನೀವು ನಂಬಬೇಡಿ ಎಂದು ಸಭೆಯಲ್ಲಿ ನನ್ನ ಹಾಗೂ ಬಿಎಸ್‍ವೈ ನಡುವೆ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *