ತಮ್ಮಿಬ್ಬರನ್ನ ಕೊಲ್ಲಲು ಬಯಸಿದ್ದ ಮಗನನ್ನ ಅರೆಸ್ಟ್ ಮಾಡಿಸಲು ಸತ್ತವರಂತೆ ನಾಟಕವಾಡಿದ ಶ್ರೀಮಂತ ತಂದೆ ತಾಯಿ

ಮಾಸ್ಕೋ: ತನ್ನ ತಂದೆ ತಾಯಿ ಹಾಗೂ 10 ವರ್ಷದ ತಂಗಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದ 22 ವರ್ಷದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಆಸ್ತಿಯೆಲ್ಲಾ ತಾನೊಬ್ಬನೇ ಅನುಭವಿಸಬೇಕು ಎಂಬ ಆಸೆಯಿಂದ ರಷ್ಯಾದ ಯುವಕ ತನ್ನ ಇಡೀ ಕುಟುಂಬವನ್ನ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ. ಇಲ್ಲಿನ ಪೊಲೀಸರ ವರದಿಯ ಪ್ರಕಾರ ಆರೋಪಿಯ ತಂದೆ-ತಾಯಿ ಅತ್ಯಂತ ಶ್ರೀಮಂತರಾಗಿದ್ದು, ಅವರು ಸತ್ತ ನಂತರ ಆಸ್ತಿಯೆಲ್ಲಾ ತನ್ನದಾಗುತ್ತದೆ ಎಂದು ಉದ್ದೇಶಿಸಿದ್ದ.

ಆದ್ರೆ ಡಿಟೆಕ್ಟೀವ್ ಗಳ ಮೂಲಕ ತಂದೆ ತಾಯಿಗೆ ಈ ವಿಷಯ ಗೊತ್ತಾಗಿತ್ತು. ಹೀಗಾಗಿ ಅವರು ಸಾಯುವ ನಾಟಕವಾಡಲು ನಿರ್ಧಾರ ಮಾಡಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ಸುಪಾರಿ ಹಂತಕನಂತೆ ವೇಷ ತೊಟ್ಟರು. ಆರೋಪಿ ಮಗ ತನ್ನ ಕುಟುಂಬಸ್ಥರನ್ನ ಎಲ್ಲಿ, ಹೇಗೆ ಕೊಲೆ ಮಾಡಬೇಕೆಂದು ಸುಪಾರಿ ಹಂತಕನಿಗೆ ಸೂಚನೆಗಳನ್ನ ನೀಡಿದ್ದ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ? ನಾಯಿಗಳಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬುದನ್ನೆಲ್ಲಾ ಹೇಳಿಕೊಟ್ಟಿದ್ದ. ತನ್ನ ಮೂವರು ಕುಟುಂಬಸ್ಥರನ್ನ ಕೊಲ್ಲುವುದಕ್ಕೆ ಹಣ ಕೊಡಲು ಒಪ್ಪಿಕೊಂಡಿದ್ದ ಆರೋಪಿ, ಕೊಲೆಯಾದ ತಂದೆ ತಾಯಿಯ ಫೋಟೋ ನೋಡಬೇಕೆಂದು ಕೇಳಿದ್ದ.

ರಷ್ಯಾದ ಸೋಚಿಯಲ್ಲಿರುವ ಮನೆಯಲ್ಲಿ ಡಿಟೆಕ್ಟೀವ್‍ಗಳು ಕೊಲೆಯ ನಾಟಕ ಮಾಡಿಸಿದ್ರು. ತಂದೆ ತಾಯಿ ಸತ್ತವರಂತೆ ನಾಟಕವಾಡಿದ್ರು. ಮೈಮೇಲೆ ಕೃತಕವಾದ ರಕ್ತ ಚೆಲ್ಲಿಕೊಂಡು ನೆಲದ ಮೇಲೆ ಬಿದ್ದು ಸತ್ತು ಹೋಗಿರುವವರಂತೆ ನಟಿಸಿದ್ದರು. ಇದರ ಫೋಟೋಗಳನ್ನ ಕ್ಲಿಕ್ಕಿಸಲಾಗಿತ್ತು. ಫೋಟೋಗಳಲ್ಲಿ ನೋಡಿದಾಗ ಅವರ ನಾಟಕ ಎಷ್ಟು ನೈಜವಾಗಿತ್ತೆಂದರೆ ಆರೋಪಿ ಮಗ ಅದನ್ನ ನೋಡಿ ತನ್ನ ಪೋಷಕರು ಸತ್ತಿದ್ದಾರೆ ಎಂದೇ ತಿಳಿದಿದ್ದ. ಆದ್ರೆ ಆರೋಪಿಯ ತಂಗಿಯ ಫೋಟೋವನ್ನ ಪೊಲೀಸರು ಬಿಡುಗಡೆ ಮಾಡದ ಕಾರಣ ಆಕೆ ಈ ನಾಟಕದಲ್ಲಿ ಭಾಗಿಯಾಗಿದ್ದಳಾ ಇಲ್ಲವಾ ಎಂಬುದು ಸ್ಪಷ್ಟವಾಗಿಲ್ಲ.

ಸುಪಾರಿ ಹಂತಕನಂತೆ ವೇಷ ಧರಿಸಿದ್ದ ಪೊಲೀಸ್ ಅಧಿಕಾರಿ ಆರೋಪಿಗೆ ಸಾವಿನ ನಟನೆಯ ಫೋಟೋ ತೋರಿಸಿದಾಗ ಆತ ಸಂತೋಷಗೊಂಡಿದ್ದ. ಆಸ್ತಿ ತನ್ನದಾದ ಕೂಡಲೇ 38 ಸಾವಿರ ಪೌಂಡ್ಸ್ (ಅಂದಾಜು 34 ಲಕ್ಷ ರೂ.) ಕೊಡುವುದಾಗಿ ಹೇಳಿದ್ದ.

ಆದ್ರೆ ಸುಪಾರಿ ಹಂತಕ ಎಂದುಕೊಂಡಿದ್ದ ವ್ಯಕ್ತಿಯೇ ತನ್ನನ್ನು ಬಂಧಿಸಲು ಬಂದಾಗ ಆರೋಪಿಗೆ ಆಶ್ಚರ್ಯವಾಗಿತ್ತು. ಅನಂತರ ಆತ ತಾನು ಪೋಷಕರನ್ನು ಕೊಲ್ಲಲು ಸಂಚು ರೂಪಿಸಿದ್ದು ಇದೇ ಮೊದಲೇನಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಕೊಲೆ ಹೇಗೆ ಮಾಡಬೇಕೆಂದು ಆತ ಇಂಟರ್ನೆಟ್‍ನಲ್ಲಿ ಸಾಕಷ್ಟು ಸರ್ಚ್ ಮಾಡಿದ್ದ. ಒಂದು ಬಾರಿ ವಿಷ ಹಾಕಲು ಯತ್ನಿಸಿದ್ದು, ಮತ್ತೊಂದು ಬಾರಿ ಕಾರಿನ ಥರ್ಮಾಮೀಟರ್ ಮುರಿಯಲು ಯತ್ನಿಸಿದ್ದ. ಹೀಗೆ ಮಾಡಿದ್ರೆ ಪಾದರಸ(ಮಕ್ರ್ಯೂರಿ) ಆವಿಯಿಂದ ಸಾಯುತ್ತಾರೆ ಎಂದುಕೊಂಡಿದ್ದ. ಆದ್ರೆ ಎರಡೂ ಬಾರಿ ಆತನ ಪ್ರಯತ್ನ ವಿಫಲವಾಗಿತ್ತು.

ತಮ್ಮ ಮಗನೇ ಈ ರೀತಿ ಮಾಡಿದನಲ್ಲ ಎಂದು ತಂದೆ ತಾಯಿ ಇನ್ನೂ ಆಘಾತದಲ್ಲಿದ್ದಾರೆ. ಆರೋಪ ಸಾಬೀತಾದರೆ ಮಗ 15 ವರ್ಷಗಳ ಜೈಲು ಶಿಕ್ಷೆ ಅನುಭವಿಸಲಿದ್ದಾನೆ.

https://www.youtube.com/watch?v=FwxU9Rw7wI0

Comments

Leave a Reply

Your email address will not be published. Required fields are marked *