ರಿವರ್ಸ್ ಆಪರೇಷನ್ ಭೀತಿ- ರೆಸಾರ್ಟ್‌ನತ್ತ ಬಿಜೆಪಿ ಶಾಸಕರು?

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕೈ-ತೆನೆ ಮುಖಂಡರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ರಿವರ್ಸ್ ಆಪರೇಷನ್‍ಗೂ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿಯ ಶಾಸಕರ ರೆಸಾರ್ಟ್ ವಾಸ್ತವ್ಯ ಬಹುತೇಕ ಫಿಕ್ಸ್ ಆದಂತಾಗಿದ್ದು, ಮಿಡ್ ನೈಟ್‍ನಲ್ಲಿ ಅನೇಕ ಕೈ ಮುಖಂಡರು ಬಿಜೆಪಿಯ ಅತೃಪ್ತರಿಗೆ ಗಾಳ ಹಾಕಿದ್ದಾರೆ. ಕೈ ಮುಖಂಡರಿಂದ ರಿವರ್ಸ್ ಅಪರೇಷನ್ ನಡೆಸಲಾಗಿದೆ. ಅಲ್ಲದೆ ಇದರೊಂದಿಗೆ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇ ಔಟ್ ಶಾಸಕ ಗೋಪಾಲಯ್ಯ ಹೋಟೆಲ್‍ಗೆ ಬಂದಿದ್ದಾರೆ ಎಂಬ ಅನುಮಾನ ಈಗ ಕಮಲ ಪಾಳಯದಲ್ಲಿ ಮೂಡಿದೆ.

ಇದೇ ವಿಚಾರವಾಗಿ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಜೊತೆ ಭೈರತಿ ಬಸವರಾಜ್ ಮುಂಬೈನಲ್ಲಿ ಜಗಳವಾಡಿದ್ದಾರೆ ಎನ್ನುವ ವಿಚಾರವಾಗಿ ಗುಸು ಗುಸು ಚರ್ಚೆ ಮಾಡಿದ್ದಾರೆ. ಇದಕ್ಕಾಗಿ ನಿನ್ನೆ ತಡರಾತ್ರಿಯವರೆಗೆ ಆಪ್ತರ ಜೊತೆ ಬಿಎಸ್‍ವೈ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ಈ ಕುರಿತು ಸಂಜೆ ಶಾಸಕಾಂಗ ಪಕ್ಷದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಬಿಜೆಪಿಯಲ್ಲೂ ಅತೃಪ್ತಿಯ ಭೀತಿ:
ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾದರೆ, ಅತೃಪ್ತ ಕೈ-ತೆನೆಯ ಬಳಗಕ್ಕಷ್ಟೇ ಸಚಿವ ಸ್ಥಾನ ಕೊಡಲಾಗುತ್ತದೆ. ಸಾಕಷ್ಟು ವರ್ಷದಿಂದ ಪಕ್ಷಕ್ಕೆ ದುಡಿದವರಿಗೆ ಅವಕಾಶ ಸಿಗುವುದಿಲ್ಲ ಎಂದು ಕೆಲ ಬಿಜೆಪಿ ಶಾಸಕರ ಅಭಿಪ್ರಾಯವಾಗಿದೆ.

ಇದೇ ವಿಚಾರವನ್ನು ಮುಂದಿಟ್ಟು ಘಟಾನುಘಟಿ ಕೈ ನಾಯಕರಿಂದ ಬಿಜೆಪಿಯ ಅತೃಪ್ತರಿಗೆ ಗಾಳ ಹಾಕಲಾಗುತ್ತಿದೆ. ಬಿಜೆಪಿ ಪಾಳಯದ ಶಾಸಕರಿಗೆ ಭರ್ಜರ ಅಫರ್ ನೀಡಿ ಸೆಳೆಯಲು ಯತ್ನಿಸಲಾಗಿದೆ. ಸುಮಾರು ನಾಲ್ಕೈದು ಜನ ಅತೃಪ್ತ ಕಮಲ ಪಾಳಯದ ಶಾಸಕರಿಗೆ ಗಾಳ ಹಾಕಲು ಕೈ ಪಾಳಯ ಸಜ್ಜಾಗಿದೆ. ಘಟಾನುಘಟಿ ನಾಯಕರೇ ಅಖಾಡಕ್ಕಿಳಿದು ಕಮಲ ಪಾಳಯದ ಶಾಸಕರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಈಗ ರಿವರ್ಸ್ ಅಪರೇಷನ್ ಭೀತಿ ಎದುರಾಗಿದೆ.

ಅತೃಪ್ತರ ಪಟ್ಟಿಯಲ್ಲಿರುವ ಶಾಸಕರನ್ನು ಶಾಸಕಾಂಗ ಸಭೆಯ ಮೊದಲೇ ಯಡಿಯೂರಪ್ಪ ತಮ್ಮ ನಿವಾಸಕ್ಕೆ ಕರೆದು ಅವರೊಂದಿಗೆ ಮಾತಾನಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ ರಿವರ್ಸ್ ಆಪರೇಷನ್‍ಗೆ ಒಳಾಗಲಿರುವ ಶಾಸಕರ ಮೇಲೆ ಬಿಎಸ್‍ವೈ ಟೀಮ್ ಹದ್ದಿನ ಕಣ್ಣಿಟ್ಟಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *