ಗೇಟಿಗೆ ಬೀಗ ಹಾಕಿ ಸರ್ಕಾರಿ ನಿವಾಸದ ಗೃಹಪ್ರವೇಶ ನಡೆಸಿದ ರೇವಣ್ಣ!

ಬೆಂಗಳೂರು: ನಗರದ ಶಿವಾನಂದ ಸರ್ಕಲ್ ಬಳಿಯಿರುವ ಸರ್ಕಾರಿ ಬಂಗಲೆ ಗೇಟಿಗೆ ಬೀಗ ಹಾಕಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಗೃಹಪ್ರವೇಶವನ್ನು ನೆರವೇರಿಸಿದ್ದಾರೆ.

ನವೀಕರಣದಿಂದಲೇ ಸುದ್ದಿಯಾಗಿದ್ದ ರೇವಣ್ಣರ ಸರ್ಕಾರಿ ಬಂಗಲೆಗೆ ಗೃಹ ಪ್ರವೇಶದ ಭಾಗ್ಯ ಸಿಕ್ಕಿದ್ದು, ಶ್ರಾವಣ ಮಾಸದ ಮೊದಲ ಸೋಮವಾರದ ದಿನದಂದು ಗೃಹಪ್ರವೇಶ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ತಾಯಿ ಚೆನ್ನಮ್ಮ ಸೇರಿದಂತೆ ಇಡೀ ದೇವೇಗೌಡರ ಕುಟುಂಬವೇ ಆಗಮಿಸಿತ್ತು. ಸರ್ಕಾರಿ ಬಂಗಲೆಯಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಸಿ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಲಾಯಿತು.

ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸುವ ಉದ್ದೇಶದಿಂದ ಗೇಟ್‍ಗೆ ಬೀಗ ಹಾಕಿದ್ದಾರೆಂದು ಹೇಳಲಾಗಿದ್ದು, ಗೃಹಪ್ರವೇಶಕ್ಕೆ ಬಂದಿದ್ದ ಪಕ್ಷದ ಯಾವೊಬ್ಬ ಮುಖಂಡರುಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ತೆರಳಿದರು.

ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಚಿವ ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕ ಕೋನರೆಡ್ಡಿ, ಪರಿಷತ್ ಸದಸ್ಯ ಶರವಣ, ರಾಜ್ಯ ಸಭಾ ಸದಸ್ಯ ಕುಪ್ಪೇಂದ್ರರೆಡ್ಡಿ, ಮಾಜಿ ಸಚಿವ ರೇವುನಾಯಕ್ ಬೆಳಮಗಿ ಆಗಮಿಸಿದ್ದರು. ಅಲ್ಲದೇ ಶಾಲಿನಿ ರಜನೀಶ್, ರಜನೀಶ್ ಗೋಯಲ್, ನಾಗಲಾಂಭಿಕ ದೇವಿ, ಆರ್.ಪಿ.ಶರ್ಮಾ ಹಾಗೂ ಚಂದ್ರಗುಪ್ತ ಸೇರಿದಂತೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ದಂಡೆ ಆಗಮಿಸಿತ್ತು.

ಗೃಹಪ್ರವೇಶ ಕಾರ್ಯಕ್ರಮದಿಂದ ತೆರಳುವಾಗ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಕೇರಳ ಪ್ರವಾಹ ಹಾಗೂ ಕೊಡಗು ಮಹಾ ಮಳೆ ಸಂತ್ರಸ್ಥರಿಗೆ ನನ್ನ ಒಂದೊಂದು ತಿಂಗಳ ಸಂಬಳ ಕೊಡಲು ನಿರ್ಧರಿಸಿದ್ದೇನೆ. ಪ್ರವಾಹ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಂಪರ್ಕದಲ್ಲಿದೆ. ಕುಮಾರಸ್ವಾಮಿಯವರನ್ನು ಈಗಾಗಲೇ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸುಮಾರು 9 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ನನಗೆ ನಡೆಯಲು ಸಾಧ್ಯವಾಗುತ್ತಿಲ್ಲ, ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ 5 ದಿನಗಳ ನಂತರ ಸ್ಥಳ ಪರಿಶೀಲನೆ ಮಾಡುತ್ತೇನೆ. ಕೊಡಗು ಜನತೆಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ನಾವು ಒತ್ತಾಯ ಮಾಡುತ್ತೇವೆ ಎಂದರು.

ಈ ವೇಳೆ ಮಾಧ್ಯಮಗಳು ಸಚಿವ ರೇವಣ್ಣ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ವಿಚಾರ ಪ್ರಸ್ತಾಪಿಸಿದಾಗ, ಈ ಕುರಿತು ನಿರಾಕರಿಸಿದ ದೇವೇಗೌಡರು, ಯಾಕಪ್ಪ ಅದಕ್ಕೆಲ್ಲಾ ಉತ್ತರ ಕೊಡಬೇಕು ಹೇಳಿ ಅಲ್ಲಿಂದ ತೆರಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *