ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ವಾಸ್ತುಪ್ರಕಾರ ರೇವಣ್ಣ ಧ್ವಜಾರೋಹಣ!

ಹಾಸನ: ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ರೇವಣ್ಣ ಎಂದಿನಂತೆ ತಮ್ಮ ವಾಸ್ತು ವಿಶೇಷತೆಯಿಂದ ಗಮನ ಸೆಳೆದಿದ್ದಾರೆ. ಖುದ್ದು ಎಸ್ಪಿಯವರ ಮೊಬೈಲ್‍ನಲ್ಲಿ ಟೈಂ ಚೆಕ್ ಮಾಡಿ, ಚಪ್ಪಲಿ ಬಿಟ್ಟು ಧ್ವಜಾರೋಹಣ ನಡೆಸಿದರು.

ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ದಶಕದ ನಂತರ ಹಾಸನ ಜಿಲ್ಲೆಯಲ್ಲಿ ಧ್ಜಜಾರೋಹಣ ನೇರವೇರಿಸಿದರು. ಈ ಮೊದಲು 2007 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಧ್ವಜಾರೋಹಣ ಮಾಡಿದ್ದರು. ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸಲಾಗಿತ್ತು.

ಸಮಯಕ್ಕೆ ಮೊದಲೇ ಬಂದಿದ್ದ ರೇವಣ್ಣ ನಿರ್ದಿಷ್ಟ ಸಮಯಕ್ಕೆ ಕಾದು, ಒಂದು ಸೆಕೆಂಡ್ ಕೂಡ ಹೆಚ್ಚು ಕಡಿಮೆ ಆಗದಂತೆ ನಿಗಾವಹಿಸಿದ್ದರು. ಅಲ್ಲದೇ ಪಕ್ಕದಲ್ಲಿ ನಿಂತಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಬಳಿ ಸಮಯ ಸರಿಯಾಗಿದ್ದನ್ನು ಸ್ಪಷ್ಟಪಡಿಸಿಕೊಂಡು ಬಳಿಕ, ಚಪ್ಪಲಿ ಬಿಟ್ಟು ಧ್ವಜಾರೋಹಣ ಮಾಡಿದರು. ಸಾಮಾನ್ಯವಾಗಿ ಪಂಚೆ ಧರಿಸುವ ರೇವಣ್ಣನವರು ಇಂದು ಪ್ಯಾಂಟ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಬಿಜೆಪಿ ನಾಯಕ ಈಶ್ವರಪ್ಪ ಆರೋಪಕ್ಕೆ ತಿರುಗೇಟು ನೀಡಿ, ಈಶ್ವರಪ್ಪನವರು ಹೇಳಿದ್ದ ಅಧಿಕಾರಿಗಳನ್ನೂ ಸಹ ನಾನು ವರ್ಗ ಮಾಡಿಕೊಟ್ಟಿದ್ದೇನೆ. ಆ ಅಧಿಕಾರಿಗಳೇನಾದರೂ ನನಗೆ ಹಣ ಕೊಟ್ಟಿದ್ದಾರೆಯೇ ಎಂಬುದನ್ನು ಬಹಿರಂಗ ಪಡಿಸಲಿ. ಅವರೊಬ್ಬ ಪ್ರತಿಪಕ್ಷ ನಾಯಕರು, ಏನೇ ಮಾತನಾಡಿದರು ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲವಾದರೆ ಅವರ ಹೇಳಿಕೆಗಳು ಪೊಳ್ಳಾಗಿ ಹೋಗುತ್ತದೆ ಎಂದು ಲೇವಡಿ ಮಾಡಿದರು.

ಈ ವೇಳೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಒಂದು ನಿಯೋಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರೇ ಈ ಬಗ್ಗೆ ಖುದ್ದು ಪರಿಶೀಲಿಸಲಿ. ನಾನು ಯಾವುದೇ ದುರುದ್ದೇಶದಿಂದ ಯಾರ ಮೇಲೆಯೂ ಕೇಸು ದಾಖಲಿಸಿಲ್ಲ. ಅಲ್ಲದೇ ಯಾರನ್ನೂ ಸಹ ಜೈಲಿಗೆ ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *