ವೃದ್ಧಾಶ್ರಮದ ಹೆಸರಿನಲ್ಲಿ ಆಸ್ತಿ ಕಬಳಿಸಲು ನಿವೃತ್ತ ಪಿಎಸ್‍ಐಯನ್ನೇ ಕಿಡ್ನಾಪ್ ಮಾಡಿದ್ರು!

ತುಮಕೂರು: ಸಮಾಜದಲ್ಲಿ ನೊಂದಿರುವ ಹಿರಿಯ ಜೀವಗಳಿಗೆ ಕೊನೆಗಾಲದಲ್ಲಿ ಸಂತಸದಿಂದ ಕಾಲ ಕಳೆಯುವಂತೆ ಆಗಲಿ. ಹಣದ ಅಮಲಿನಲ್ಲಿ ತೇಲುವ ಮಕ್ಕಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ರೆ ಇಲ್ಲಾದ್ರು ನೆಮ್ಮದಿ ಜೀವನ ಸಿಗಲಿ ಅಂತ ವೃದ್ಧಾಶ್ರಮಗಳನ್ನು ಮಾಡ್ತಾರೆ.

ಆದ್ರೆ ಮಾಜಿ ಗೃಹ ಸಚಿವರೊಬ್ಬರ ಜಿಲ್ಲೆಯಲ್ಲೊಂದು ಉಲ್ಟಾ ಕೇಸ್. ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಎನ್ ಗೋಪಾಲಯ್ಯ ಎಂಬವರು ಬೆಂಗಳೂರಿನ ಎಮ್‍ಎಸ್ ಬಿಲ್ಡಿಂಗ್‍ನಲ್ಲಿರುವ ಸಹಕಾರಿ ಇಲಾಖೆ ಉಪ ಕಾರ್ಯದರ್ಶಿ. ಆಸ್ತಿ ಕಬಳಿಸುವ ಉದ್ದೇಶದಿಂದ ವೃದ್ಧಾಶ್ರಮ ನಡೆಸುವ ನಾಟಕ ಮಾಡ್ತಿದ್ದಾರೆ ಅನ್ನೋ ಆರೋಪ ಎದುರಾಗಿದೆ.

ಗೋಪಾಲಯ್ಯ ಶಿರಾ ಪಟ್ಟಣದ ನಿವೃತ್ತ ಪಿಎಸ್‍ಐ ನರಸಿಂಹಯ್ಯರನ್ನು ಕಿಡ್ನಾಪ್ ಮಾಡಿ ಆಸ್ತಿ ಬರೆಸಿಕೊಳ್ಳಲು ಸಂಚು ರೂಪಿಸಿದ್ದಾರೆ ಅಂತ ಸ್ವತಃ ನರಸಿಂಹಯ್ಯ ಪತ್ನಿ ತಿಪ್ಪಮ್ಮ ಶಿರಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ನನ್ನ ಗಂಡನ ಬಳಿ 60 ಕೋಟಿಗೂ ಹೆಚ್ಚು ಆಸ್ತಿ ಇದ್ದು, ನಿವೃತ್ತ ಜೀವನ ನಡೆಸುವ ಉದ್ದೇಶದಿಂದ 9 ಎಕರೆ ಜಮೀನು ಖರೀದಿ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ 3 ಎಕರೆ ಜಮೀನು ಗೋಪಾಲಯ್ಯನೇ ಬರೆಸಿಕೊಂಡಿದ್ದು, ಇನ್ನುಳಿದ ಜಮೀನು ಕಬಳಿಸುವ ಪ್ಲಾನ್ ಮಾಡಿದ್ದಾರೆ ಅಂತ ಪತ್ನಿ ದೂರಿನಲ್ಲಿ ಹೇಳಿದ್ದಾರೆ.

ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸಲು 3 ಎಕರೆ ದಾನ ಕೊಡಿ ಎಂದು ದುಂಬಾಲು ಬಿದ್ದ ಗೋಪಾಲಯ್ಯ, ಅನಾಥಾಶ್ರಮದ ಬದಲು ತನ್ನ ಮಗಳು ಹಾಗೂ ಮಗನ ಹೆಸರಿಗೆ 3 ಎಕರೆ ಜಮೀನನ್ನು ಬರೆಸಿಕೊಂಡಿದ್ದಾರೆ. ನರಸಿಂಹಯ್ಯ ಕಟ್ಟಿಸಿದ ಮನೆಯಿಂದ ಅವರನ್ನೇ ಹೊರಹಾಕಿ ತನ್ನ ಮಗಳ ಹೆಸರಿಗೆ ಮನೆ ಖಾತೆ ಮಾಡಿಸಿಕೊಂಡಿದ್ದಾರೆ. 8 ಜನ ಮಕ್ಕಳ ನಡುವೆಯೇ ವೈಷಮ್ಯ ತಂದಿಟ್ಟು ಆಸ್ತಿ ಲಪಟಾಯಿಸುವ ಯತ್ನ ನಡೆಸಿದ್ದಾರಂತೆ.

ಡಿಎಸ್‍ಎಸ್ ಮುಖಂಡ ಭರತ್ ಕುಮಾರ್ ಸಹಕಾರಿ ಇಲಾಖೆ ಉಪಕಾರ್ಯದರ್ಶಿ 420 ಕೆಲಸಕ್ಕೆ ಸಾಥ್ ನೀಡುತ್ತಿದ್ದಾನೆ. ಗ್ಯಾಂಗ್ರಿನ್‍ನಿಂದ ಬಳಲುತ್ತಿದ್ದ ನರಸಿಂಹಯ್ಯರ ಕಾಲು ತೆಗೆಯಲಾಗಿತ್ತು. ಕಿಡ್ನ್ಯಾಪ್ ಆಗಿದ್ದಾರೆ ಅಂತ ದೂರು ಕೊಟ್ರೂ ಕಾನೂನು ಸಚಿವರ ಜಿಲ್ಲೆಯ ಖಾಕಿಗಳು ಕೈ ಕಟ್ಟಿ ಕುಳಿತಿದ್ದಾರೆ ಅನ್ನೋದು ವೃದ್ಧ ಪತ್ನಿ ಮತ್ತು ಮಕ್ಕಳ ಆರೋಪವಾಗಿದೆ.

Comments

Leave a Reply

Your email address will not be published. Required fields are marked *