ರಾತ್ರೋರಾತ್ರಿ ರಸ್ತೆಯಲ್ಲೇ ಕಾಂಪೌಂಡ್ ಕಟ್ಟಿದ ನಿವೃತ್ತ ಡಿಸಿಪಿ- ರಸ್ತೆಗಾಗಿ ಬೀದಿಗೆ ಬಂದ ಜನ

ಬೆಂಗಳೂರು: ಅವರೆಲ್ಲಾ ಸುಮಾರು ವರ್ಷಗಳಿಂದ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಆ ರಸ್ತೆ ಈ ಲೇಔಟ್ ಗೆಲ್ಲಾ ಮುಖ್ಯ ರಸ್ತೆಯಾಗಿತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೆ ರಸ್ತೆಯನ್ನು ಬಂದ್ ಮಾಡಲಾಗಿದೆ. ರಸ್ತೆ ಪಕ್ಕದ ಸೈಟ್ ಕೊಂಡುಕೊಂಡಿರೋ ಪ್ರಭಾವಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಈಗ ಜನರ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ.

ತಮ್ಮ ಕೆಲಸ ಕಾರ್ಯ ಬಿಟ್ಟು ಇವರೆಲ್ಲಾ ಇಲ್ಲಿ ಸೇರಿರೋದಕ್ಕೆ ಕಾರಣ ರಸ್ತೆ ಕಾಂಪೌಂಡ್. ಇವರು ಬೆಂಗಳೂರಿನ ಹೇರೋಹಳ್ಳಿಯ ವಿಘ್ನೇಶ್ವರ ಲೇಔಟ್ ನಿವಾಸಿಗಳು. ಹಲವು ದಿನಗಳಿಂದ ತಮ್ಮ ಪ್ರತಿನಿತ್ಯದ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದ ರಸ್ತೆಯಲ್ಲಿ ರಾತ್ರೋ ರಾತ್ರಿ ಕಾಂಪೌಂಡ್ ಎದ್ದಿತ್ತು. ಇದರಿಂದ ಕೆರಳಿದ ಜನ ತಾವೇ ಕಾಂಪೌಂಡ್ ಕೆಡವಿ ಹಾಕಿದರು.

ನಿವೃತ್ತ ಡಿಸಿಪಿ ಎಲ್‍ಜಿ ಕೃಷ್ಣಪ್ಪ ಖರೀದಿಸಿರೋ ಈ ಸೈಟ್‍ನಲ್ಲಿ ಒಟ್ಟು ಎರಡು ರಸ್ತೆಗಳು ಬರುತ್ತವೆ. ಈ ಎರಡು ರಸ್ತೆಗಳನ್ನ ಮುಚ್ಚಿರೋ ಸೈಟ್ ಮಾಲೀಕರು ಓಡಾಡಕ್ಕೆ ರಸ್ತೆ ಬಿಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ ಅನ್ನೋದು ಜನರ ಆರೋಪ.

ಈ ಬಗ್ಗೆ ಸ್ಥಳೀಯರು ಹಲವಾರು ಬಾರಿ ಬಿಬಿಎಂಪಿ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಯಾವ ಅಧಿಕಾರಿಯೂ ಸರಿಯಾಗಿ ಸ್ಪಂದಿಸಿಲ್ಲ. ಸ್ಥಳೀಯ ಕಾರ್ಪೋರೇಟರ್ ಸಹ ಸ್ಥಳೀಯರ ಮನವಿಗೆ ಸ್ಪಂದಿಸದ ಕಾರಣ ಇವತ್ತು ಲೇಔಟ್ ನಿವಾಸಿಗಳೇ ಕಾಂಪೌಂಡ್ ತೆರವುಗೊಳಿಸಿದರು. ತೆರವುಗೊಳಿಸಬೇಕಾದರೆ ಸ್ಥಳಕ್ಕೆ ಬಂದ ಮಾಲೀಕನ ಸಂಬಂಧಿಕರೊಬ್ಬರು ಸ್ಥಳೀಯರ ಜೊತೆ ಮಾತಿನ ಚಕಮಕಿ ನಡೆಸಿದರು.

ನಮಗೆ ರಸ್ತೆ ಬಿಡುವ ತನಕ ಎಷ್ಟೇ ಕಾಂಪೌಂಡ್ ಹಾಕಿದರೂ ನಾವು ಕೆಡುವುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಆದರೆ ಸೈಟ್ ಮಾಲೀಕರು ಈ ಸೈಟ್ ನನ್ನದು, ರಸ್ತೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *