ಬಿಜೆಪಿ ನಾಯಕನ ಮನೆ ಧ್ವಂಸಗೊಳಿಸಿದ ನಕ್ಸಲರು

ಪಾಟ್ನಾ: ಬಿಹಾರ ರಾಜ್ಯದ ಗಯಾ ಜಿಲ್ಲೆಯ ಡುಮಾರಿಯಾ ಇಲಾಖೆ ವ್ಯಾಪ್ತಿಯಲ್ಲಿ ನಕ್ಸಲರು ಬಿಜೆಪಿ ನಾಯಕರೊಬ್ಬರ ಮನೆಯನ್ನು ಡೈನಾಮೈಟ್ ನಿಂದ ಧ್ವಂಸಗೊಳಿಸಿದ್ದಾರೆ.

ಮಾಜಿ ಎಂಎಲ್‍ಸಿ ಅನುಜ್ ಕುಮಾರ್ ಸಿಂಗ್ ಎಂಬವರ ಮನೆ ಸಂಪೂರ್ಣವಾಗಿ ನಕ್ಸಲರ ದಾಳಿಗೆ ತುತ್ತಾಗಿದೆ. ಮನೆಯನ್ನ ಧ್ವಂಸಗೊಳಿಸಿದ ಬಳಿಕ ನಕ್ಸಲರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಪತ್ರವೊಂದನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಗಯಾ ಜಿಲ್ಲೆಯ ಪೊಲೀಸರು ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾತ್ರಿ ಸುಮಾರು 1 ಗಂಟೆಗೆ ನಕ್ಸಲರು ಬಿಜೆಪಿ ನಾಯಕನ ಮೇಲೆ ದಾಳಿ ನಡೆಸಿದ್ದಾರೆ. ಡೈನಾಮೈಟ್ ದಾಳಿಯಿಂದಾಗಿ ಅನುಜ್ ಕುಮಾರ್ ಮನೆ ಸಂಪೂರ್ಣ ಧ್ವಂಸವಾಗಿದ್ದು, ಸ್ಥಳೀಯ ನಾಯಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಡುಮಾರಿಯಾ ಇಲಾಖೆಯ ಗ್ರಾಮಗಳಲ್ಲಿ ಜನರು ಎಲ್ಲಿ, ಯಾವಾಗ ದಾಳಿ ನಡೆಯುತ್ತೆ ಎಂಬ ಭಯದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿವೆ.

ಅನುಜ್ ಕುಮಾರ್ ಈ ಮೊದಲೇ ನಕ್ಸಲರ ಟಾರ್ಗೆಟ್ ಆಗಿದ್ದರು. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿರುವ ಬಗ್ಗೆ ಬಗ್ಗೆ ವರದಿಯಾಗಿಲ್ಲ. ಪೊಲೀಸರು ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *