ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ- ಜೈಲಿನಲ್ಲಿ ‘ಯಜಮಾನ’ ಪರದಾಟ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣ (Renukaswamy Case) ಸಂಬಂಧ ಜೈಲು ಸೇರಿರುವ ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಸರಿಯಾಗಿ ಊಟ ಸೇರದೆ, ನಿದ್ದೆ ಬರದೇ ಪರದಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು. ಫಿಟ್ನೆಸ್ ಮೆಂಟೈನ್ ಮಾಡಲು ಚಿಕನ್, ಮಟನ್, ಫ್ರೂಟ್ಸ್, ಜ್ಯೂಸ್ ಸೇವಿಸುತ್ತಿದ್ದ ದರ್ಶನ್‍ಗೆ ಜೈಲೂಟ ಒಗ್ಗುತ್ತಿಲ್ಲ. ಜೈಲಿನಲ್ಲಿ ಸರಿಯಾಗಿ ಉಪ್ಪು ಖಾರ ಇಲ್ಲದ ಸಾಂಬಾರ್, ಮುದ್ದೆ, ಅನ್ನ ತಿನ್ನಲು ಕಷ್ಟಪಡುತ್ತಿದ್ದಾರೆ. ನಿನ್ನೆ ರಾತ್ರಿ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಸಿಬ್ಬಂದಿ ನೀಡಿದ್ದಾರೆ. ಹೀಗಾಗಿ ಜೈಲೂಟ ತಿನ್ನಲಾಗದೆ ಯಜಮಾನ ಪರದಾಟ ಅನುಭವಿಸಿದ್ದಾರೆ.

ತಡರಾತ್ರಿ ನಿದ್ದೆಗೆ ಜಾರಿದ ದರ್ಶನ್, ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದಾರೆ. ಕಾಫಿ ಸೇವಿಸದೆ ಬಿಸಿನೀರು ಕೇಳಿ ಪಡೆದಿದ್ದಾರೆ. ಸಹಖೈದಿಗಳು ಮಾತನಾಡಲು ಯತ್ನಿಸಿದ್ರೂ ದರ್ಶನ್ ಅವರ ಜೊತೆಗೂ ಅಷ್ಟಾಗಿ ಬೆರೆಯಲಿಲ್ಲ. ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಕೊಠಡಿಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಮೂಲಕ ನಿಮ್ಮ ಸಹವಾಸ ಸಾಕಪ್ಪ ಎಂಬ ಸಂದೇಶ ರವಾನಿಸಿದಂತಿದೆ. ಇದನ್ನೂ ಓದಿ: ಜೈಲಿನ ಸೆಕ್ಯುರಿಟಿ ಸೆಲ್‍ನಲ್ಲಿ ದರ್ಶನ್- ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ‘ದಾಸ’?

ದರ್ಶನ್ ಸದ್ಯ ಪರಪ್ಪನ ಅಗ್ರಹಾರದ ವಿಶೇಷ ಬ್ಯಾರಕ್ ನಲ್ಲಿದ್ದಾರೆ. ಇವರ ಜೊತೆ ಧನರಾಜ್, ವಿನಯ್ ಪ್ರದೂಶ್ ಒಂದೇ ಕೊಠಡಿಯಲ್ಲಿದ್ದಾರೆ. ಈ ನಡುವೆ ಇಂದು ತುಮಕೂರು ಜೈಲಿಗೆ ಶಿಫ್ಟ್ ಮಾಡುವ ಕುರಿತು ವಿಚಾರಣೆ ನಡೆಯಲಿದೆ.