ಎರಡ್ಮೂರು ಬಾರಿ ಸಚಿವರಾದವರು ಈಗ ಸ್ಥಾನ ಬಿಟ್ಟುಕೊಡಲಿ: ರೇಣುಕಾಚಾರ್ಯ ಆಗ್ರಹ

– ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಗರ್ಭಪಾತ ಆಗಿದೆ

ಹುಬ್ಬಳ್ಳಿ: ಈ ಹಿಂದೆ ಸರ್ಕಾರದಲ್ಲಿ ಎರಡ್ಮೂರು ಬಾರಿ ಸಚಿವರಾಗಿ, ಈಗಲೂ ಸಚಿವರಾಗಿ ಇರುವವರು ತಮ್ಮ ಸ್ಥಾನ ಬಿಟ್ಟುಕೊಡಲಿ. ಹೊಸಬರಿಗೆ ಅವಕಾಶ ಕೊಡಲಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಂತರ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡಿ ಎಂದು ಕೇಳುವುದಿಲ್ಲ. ಆ ರೀತಿಯ ಆಸೆಯೂ ನನಗಿಲ್ಲ. ಹೊಸ ಶಾಸಕರಿಗೆ ಸಚಿವ ಸ್ಥಾನ ಕೊಟ್ಟು, ಅನುಭವಿ ನಾಯಕರು ಪಕ್ಷ ಸಂಘಟನೆ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಇದನ್ನು ಪಕ್ಷದ ಹಿರಿಯರಿಗೂ ತಿಳಿಸಿದ್ದೇನೆ ಎಂದರು.

ಹುಬ್ಬಳ್ಳಿಯಲ್ಲಿ ಕಾರ್ಯಕಾರಿಣಿ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ಬಿಟ್ಟಿಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಅಡ್ಡಗಾಲು ಹಾಕಿತು ಎಂದು ಟೀಕಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ

ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಕಾಯ್ದೆ ಜಾರಿಗೆ ತರುವಂತೆ ಸಾಧು ಸಂತರು, ಧಾರ್ಮಿಕ ಮುಖಂಡರು ನಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದರು. ಆಸೆ, ಆಮಿಷಕ್ಕೆ ಮತಾಂತರ ಆಗುತ್ತಿದೆ ಅಂತ ಹೇಳಿದ್ದರು ಎಂದರು.

ಇಟಲಿಯ ಸೋನಿಯಾ ಗಾಂಧಿ ಮಾತು ಕೇಳುವ ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ, ಒಂದೇ ಒಂದು ಸಾರಿ ಬಹಿರಂಗವಾಗಿ ನಾವು ಹಿಂದೂ ಎಂದು ಹೇಳಿಕೊಳ್ಳಲಿ ನೋಡೋಣ ಎಂದು ಸವಾಲು ಹಾಕಿದರು. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಂಪುಟ ವಿಸ್ತರಣೆ ಮಾಡಬೇಕು. ನನಗೆ ಸಚಿವ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದರು. ಇದನ್ನೂ ಓದಿ: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ: ರಾಘಣ್ಣ

ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಗರ್ಭಪಾತ ಆಗಿದೆ. ಅದು ಹೆಣ್ಣೋ, ಗಂಡೋ ಗೊತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ನಿಮಗೆ ಹಿಂದೂಗಳು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.

Comments

Leave a Reply

Your email address will not be published. Required fields are marked *