ಡೇಟಾ, 4ಜಿ ಫೀಚರ್ ಫೋನ್ ಆಯ್ತು, ಈಗ ಜಿಯೋದಿಂದ ಸಿಮ್ ಇರೋ ಲ್ಯಾಪ್‍ಟಾಪ್!

ನವದೆಹಲಿ: ಕಡಿಮೆ ಬೆಲೆಯಲ್ಲಿ ಡೇಟಾ, 4ಜಿ ಫೀಚರ್ ಫೋನ್ ಬಿಡುಗಡೆ ಮಾಡಿದ್ದ ಜಿಯೋ ಈಗ ಕಡಿಮೆ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಸಿಮ್ ಹೊಂದಿರುವ ಲ್ಯಾಪ್ ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ.

ಹೌದು. ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಟಿತ ಹಾರ್ಡ್ ವೇರ್ ಕಂಪನಿ ಕ್ವಾಲ್ಕಾಮ್ ಜೊತೆ ವಿಂಡೋಸ್ 10 ಆಪರೇಟಿಂಗ್ ವ್ಯವಸ್ಥೆ ಇರುವ ಲ್ಯಾಪ್ ಟಾಪ್‍ಗಳಲ್ಲಿ ಸಿಮ್‍ಗಳನ್ನು ಅಳವಡಿಸುವುದರ ಕುರಿತು ರಿಲಯನ್ಸ್ ಜಿಯೋ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

ಈಗಾಗಲೇ ಕ್ವಾಲ್ಕಾಮ್ ಕಂಪನಿಯು ಹೆಚ್‍ಪಿ, ಏಸಸ್, ಲೆನೊವೊ ಲ್ಯಾಪ್ ಟಾಪ್ ಕಂಪೆನಿಗಳ ಜೊತೆ ಇದೇ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದೆ. ಲ್ಯಾಪ್ ಟಾಪ್ ಸದಾ ಇಂಟರ್‍ನೆಟ್ ಸಂಪರ್ಕದಲ್ಲಿರುವಂತೆ ಈ ಹೊಸ ವ್ವವಸ್ಥೆ ನೋಡಿಕೊಳ್ಳಲಿದೆ. ಈ ಹೊಸ ವ್ಯವಸ್ಥೆಗೆ ಬಹಳಷ್ಟು ದೇಶಗಳ ಮೊಬೈಲ್ ಸೇವಾ ಆಪರೇಟರ್ ಗಳು ಬೆಂಬಲ ಸೂಚಿಸಿವೆ.

ಸಿಮ್ ಯಾಕೆ?
ಲ್ಯಾಪ್ ಟಾಪ್ ನೊಂದಿಗೆ ಹೊರಗಡೆ ಹೋದಾಗ ಇಂಟರ್ ನೆಟ್ ಸಂಪರ್ಕ ಬೇಕಾದರೆ ವೈಫೈ ವ್ಯವಸ್ಥೆ ಇರಬೇಕಾಗುತ್ತದೆ. ವೈಫೈ ಸಂಪರ್ಕ ಸಿಗದ ಕಡೆ ಇಂಟರ್ ನೆಟ್ ಪಡೆಯಬೇಕಾದರೆ ಮೊಬೈಲ್ ಮೂಲಕ ಹಾಟ್ ಸ್ಪಾಟ್ ಓಪನ್ ಮಾಡಿ ವೈಫೈ ಸಂಪರ್ಕ ಕಲ್ಪಿಸಬೇಕಾಗುತ್ತದೆ ಅಥವಾ ಹಾಟ್ ಸ್ಪಾಟ್ ಸಾಧನಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಲ್ಯಾಪ್ ಟಾಪ್ ನಲ್ಲೇ ಸಿಮ್ ಅಳವಡಿಸುವ ಪ್ರಯತ್ನ ನಡೆಯುತ್ತಿದೆ.

ಕೌಂಟರ್ ಪಾಯಿಂಟ್ ಸಂಸ್ಥೆಯ ನೀಡಿದ ಡೇಟಾಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 50 ಲಕ್ಷ ಲ್ಯಾಪ್ ಟಾಪ್ ಗಳು ಮಾರಾಟವಾಗುತ್ತಿದ್ದು, ಇವುಗಳಿಗೆ ಕಚೇರಿ, ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಹಾಟ್ ಸ್ಪಾಟ್ ಗಳು ಕನೆಕ್ಟ್ ಆಗುತ್ತದೆ.

ಸೈಬರ್ ಭದ್ರತೆ ಮತ್ತು ಖಾಸಗಿ ಮಾಹಿತಿ ಸೋರಿಕೆಯಾಗದೇ ಇರಲು ಯಾವಾಗಲೂ ವೈಫೈ ನೆಟ್‍ವರ್ಕ್ ಗಿಂತ ಸೆಲ್ಯುಲರ್ ನೆಟ್‍ವರ್ಕ್ ಹೆಚ್ಚು ಸುರಕ್ಷಿತ. ಈ ಕಾರಣಕ್ಕಾಗಿ ಟೆಲಿಕಾಂ ಕಂಪೆನಿಗಳು ಸಿಮ್ ಆಧಾರಿತ ಲ್ಯಾಪ್ ಟಾಪ್ ಬಿಡುಗಡೆ ಮುಂದಾಗುತ್ತಿದೆ. ಇದರ ಜೊತೆ ಡೇಟಾದ ಮೂಲಕ ಟೆಲಿಕಾಂ ಕಂಪೆನಿಗಳು ಆದಾಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ.  ಇದನ್ನೂ ಓದಿ: ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

Comments

Leave a Reply

Your email address will not be published. Required fields are marked *