ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

ಮುಂಬೈ: ಒಂದು ಒಪ್ಪಂದ ಮತ್ತು ಒಂದು ಮಾಧ್ಯಮ ಹೇಳಿಕೆಯಿಂದಾಗಿ 10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ ದೇಶದ ಮೊದಲ ಕಂಪನಿಯಾಗಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್) ಹೊರಹೊಮ್ಮಿದೆ.

ಗುರುವಾರ ರಿಲಯನ್ಸ್ ಷೇರು ಸಾರ್ವಕಾಲಿಕ ಗರಿಷ್ಠ 1,581 ರೂ. ತಲುಪುವ ಮೂಲಕ ಮಾರುಕಟ್ಟೆ ಮೌಲ್ಯ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. 2019ರಲ್ಲಿ ರಿಲಯನ್ಸ್ ಷೇರು ಶೇ. 40ರಷ್ಟು ಏರಿಕೆ ಕಂಡಿದ್ದರೆ ಇಂದು ಶೇ.0.70ರಷ್ಟು ಏರಿಕೆ ಕಂಡಿದ್ದರಿಂದ ಈ ದಾಖಲೆ ನಿರ್ಮಾಣವಾಗಿದೆ.

ಸೌದಿ ಅರಾಮ್ಕೋ ಕಂಪನಿಯ ಜೊತೆಗೆ ರಿಲಯನ್ಸ್ ಒಪ್ಪಂದ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಜಿಯೋ ತನ್ನ ಕರೆ ಮತ್ತು ಡೇಟಾ ದರಗಳನ್ನು ಏರಿಸುವುದಾಗಿ ಹೇಳಿತ್ತು. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಕಂಡು ಬಂದಿದ್ದು ಹೂಡಿಕೆದಾರರು ಷೇರುಗಳನ್ನು ಖರೀದಿಸಲು ಆಸಕ್ತಿ ತೋರಿದ್ದರಿಂದ ರಿಲಯನ್ಸ್ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಅಗಸ್ಟ್ ತಿಂಗಳಿನಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ, ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ ರೂ.) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ. ಸೌದಿ ಅರಾಮ್ಕೊ ಕಂಪನಿಗೆ ರಿಲಯನ್ಸ್ ಷೇರುಗಳನ್ನು ಮಾರಾಟ ಮಾಡುವ ಮೂಲಕ 18 ತಿಂಗಳಲ್ಲಿ ಸಂಸ್ಥೆಯನ್ನು ಸಾಲಮುಕ್ತಗೊಳಿಸುವುದಾಗಿ ಘೋಷಿಸಿದ್ದರು.

ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ ಟೆಲ್ ಕಂಪನಿಯಿಂದ ಡಿಸೆಂಬರಿನಿಂದ ಡೇಟಾ ಮತ್ತು ಕರೆ ದರಗಳನ್ನು ಏರಿಕೆ ಮಾಡುತ್ತೇವೆ ಎಂಬ ಪ್ರಕಟಣೆ ಹೊರ ಬಿದ್ದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಸಹ ಕರೆ ದರಗಳನ್ನು ಏರಿಸುವುದಾಗಿ ಹೇಳಿದೆ. ಇದನ್ನೂ ಓದಿ: ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?

ಕಳೆದ ತಿಂಗಳು ಡಿಜಿಟಲ್ ಸರ್ವಿಸ್ ಬಿಸಿನೆಸ್ ಸಂಬಂಧ ಕಂಪನಿ ಸ್ಥಾಪಿಸುವುದಾಗಿ ರಿಲಯನ್ಸ್ ಹೇಳಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಜಿಯೋಗೆ 35 ಕೋಟಿ ಗ್ರಾಹಕರಿದ್ದರೆ 12,354 ಕೋಟಿ ರೂ. ಆದಾಯ ಗಳಿಸಿತ್ತು. ಅಷ್ಟೇ ಅಲ್ಲದೇ 990 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ರಿಲಯನ್ಸ್ ಕಂಪನಿ ಭಾರತದ ಇತಿಹಾಸದಲ್ಲಿ ದೊಡ್ಡ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ಸಂಬಂಧ ಸೌದಿ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ.

ತೈಲ, ಟೆಲಿಕಾಂ, ರಿಟೇಲ್ ಈ ಮೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯುತ್ತಿರುವ ದೇಶದ ಏಕೈಕ ಕಂಪನಿ ರಿಲಯನ್ಸ್ ಎಂದು ಮುಕೇಶ್ ಅಂಬಾನಿ ವಾರ್ಷಿಕ ಸಭೆಯಲ್ಲಿ ತಿಳಿಸಿದ್ದರು.

ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿ ಹೊರಹೊಮ್ಮಿದೆ.

ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.

Comments

Leave a Reply

Your email address will not be published. Required fields are marked *